ಅಹಮದ್‍ನಗರ(ಮಹಾರಾಷ್ಟ್ರ): 2014ರಲ್ಲಿ ಲೋನಿ ಮಾವಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ್ದ ಆರೋಪಿಗಳಾದ ಸಂತೋಷ್ ಲೊಂಕಾರ್(35), ಮಂಗೇಶ್ ಲೊಂಕಾರ್(30) ಮತ್ತು ದತ್ತಾತ್ರೇಯ ಶಿಂಧೆ(27)ಗೆ ಮರಣ ದಂಡನೆ ವಿಧಿಸಬೇಕು ಎಂದು ಸರ್ಕಾರಿ ವಕೀಲರು ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದ್ದರು. ಅಂತೇ ನ್ಯಾಯಮೂರ್ತಿಗಳು ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದಾರೆ.
ಅಹಮದ್‍ನಗರ ಜಿಲ್ಲೆಯ ಲೋನಿ ಮಾವಲಾದಲ್ಲಿ ಮೃತ ಅಪ್ರಾಪ್ತ ಬಾಲಕಿ ತನ್ನ ತಾತನನ್ನು ನೋಡಿಕೊಂಡು ಬರಲು ತೆರಳಿದ್ದಾಗ ಆಕೆಯನ್ನು ಅಪಹರಿಸಿದ ಮೂವರು ಕಾಮಾಂಧರು ಸಾಮೂಹಿಕ ಅತ್ಯಾಚಾರ ನಡೆಸಿ ಚೂರಿಯಿಂದ ಇರಿದು ಹತ್ಯೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾರನೇ ದಿನವೇ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರದ ತನಿಖೆಗೆ ವೇಳೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿ 2014ರ ನವೆಂಬರ್ 18ರಂದು ಚಾರ್ಚ್ ಶೀಟ್ ಸಲ್ಲಿಸಿದ್ದರು.