ನವದೆಹಲಿ: ನೋಟುಗಳ ಅನಾಣ್ಯೀಕರಣದ ನಂತರ ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ 1,491.50 ಕಿಲೋ ಚಿನ್ನ, 572.63 ಕಿಲೋ ಬೆಳ್ಳಿ ಮತ್ತು 87.17 ಕೋಟಿ ರೂಪಾಯಿ ಅಕ್ರಮ ನೋಟುಗಳನ್ನು ಪತ್ತೆಹಚ್ಚಲಾಗಿದೆ ಎಂದು ಕೇಂದ್ರ ಕೈಗಾರಿಕೆ ಭದ್ರತಾ ಪಡೆ ತಿಳಿಸಿದೆ.
ಹೆಚ್ಚಿನ ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೆಹಲಿ, ಜೈಪುರ ಮತ್ತು ಮುಂಬೈ ವಿಮಾನ ನಿಲ್ದಾಣಗಳಿಂದ ವಶಪಡಿಸಿಕೊಳ್ಳಲಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿಯೇ 498.35 ಕಿಲೋ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ವರ್ಷ ನವೆಂಬರ್ 8ರಂದು 500 ಮತ್ತು 1000ದ ನೋಟುಗಳ ಅಮಾನ್ಯೀಕರಣದ ನಂತರ ಕೇಂದ್ರ ಕೈಗಾರಿಕೆ ಭದ್ರತಾ ಪಡೆಗ ಹಣಕಾಸು ಸಚಿವಾಲಯ ಸೂಚನೆ ನೀಡಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಶಂಕಾಸ್ಪದವಾಗಿ ಚಿನ್ನ, ಬೆಳ್ಳಿ ಮತ್ತು ಅಗಾಧ ಮೊತ್ತದ ಹಣವನ್ನು ಸಾಗಾಟ ಮಾಡುತ್ತಿರುತ್ತಾರೆಯೇ ಎಂದು ಗಮನಿಸುತ್ತಿರುವಂತೆ ಹೇಳಿತ್ತು.
ಹಣಕಾಸು ಸಚಿವಾಲಯದ ಈ ಕೆಲಸದಲ್ಲಿ ದೇಶದ 59 ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿರಿಸುವಂತೆ ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ ಸಹಕಾರವನ್ನು ಕೋರಲಾಗಿತ್ತು.
ಕಾನೂನಿನ ಪ್ರಕಾರ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ತನಗೆ ಸಂಶಯಾಸ್ಪದ ರೀತಿಯಲ್ಲಿ ಸಾಗಾಟ ಕಂಡುಬಂದರೆ ಅದನ್ನು ಆದಾಯ ತೆರಿಗೆ ಇಲಾಖೆಯ ವಿಮಾನ ಜಾಗೃತ ಘಟಕಕ್ಕೆ ತಿಳಿಸುತ್ತದೆ.