ನವದೆಹಲಿ: ಸಮ-ಬೆಸ ನಿಯಮ ಜಾರಿಯಲ್ಲಿರುವಾಗ ದೆಹಲಿ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ದೆಹಲಿ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.
ಈ ಬಗ್ಗೆ ಶುಕ್ರವಾರ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಸಮ-ಬೆಸ ನೀತಿ ಜಾರಿ ಬಳಿಕ ದೆಹಲಿಯಲ್ಲಿ ಅರ್ಧದಷ್ಟು ವಾಹನಗಳ ಸಂಖ್ಯೆ ಕಡಿತವಾಗಲಿದೆ. ಹೀಗಾಗಿ ಪ್ರಯಾಣಿಕರ ಪರದಾಟ ತಪ್ಪಿಸುವ ಸಲುವಾಗಿ ಸರ್ಕಾರ ದೆಹಲಿ ಸಾರಿಗೆ ಇಲಾಖೆ ವತಿಯಿಂದ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಘೋಷಣೆ ಮಾಡಿದರು. ಸರ್ಕಾರದ ಈ ಉಚಿತ ಪ್ರಯಾಣ ಅವಕಾಶ ಕಲ್ಪಿಸುವುದರಿಂದ ಜನರು ಖಾಸಗಿ ವಾಹನಗಳ ಮೇಲೆ ಅವಲಂಬನೆ ಕಡಿಮೆ ಮಾಡುತ್ತಾರೆ. ಇದರಿಂದ ತಕ್ಕಮಟ್ಟಿಗೆ ವಾಹನ ಸಂಖ್ಯೆ ನಿಯಂತ್ರಿಸಬಹುದೆಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ ದೆಹಲಿಯಲ್ಲಿ ಆವರಿಸಿರುವ ದಟ್ಟ ಹೊಗೆಯ ವಾತಾವರಣ ಮುಂದುವರೆದಿದ್ದು, ಹೊಗೆಯ ಪರಿಣಾಮ ಇಂದು ದೆಹಲಿಯಲ್ಲಿ 64 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇನ್ನು ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಇಂದು ಮುಂಜಾನೆ ದೆಹಲಿಯಲ್ಲಿ ವಾಯು ಮಾಲೀನ್ಯ ಪ್ರಮಾಣದಲ್ಲಿ ಅಲ್ಪ ಮಟ್ಟದ ಕಡಿತವಾಗಿದೆಯಾದರೂ ಅಪಾಯದ ಮಟ್ಟ ಮುಂದುವರೆದಿದೆ. ದೆಹಲಿಯ ಕೆಲ ಪ್ರದೇಶಗಳಲ್ಲಿ ಇಂದು ಅಪಾಯಕಾರಿ ಪಿಎಂ10 ಮತ್ತು ಪಿಎಂ2.5 ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ದೆಹಲಿಯ ಮಂದಿರ್ ಮಾರ್ಗ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 326ರಷ್ಟಿದೆ. ಅಂತೆಯೇ ಆನಂದ್ ವಿಹಾರ್ ನಲ್ಲಿ 430 ಮತ್ತು ಸಿರಿ ಫೋರ್ಟ್ ಪ್ರದೇಶದಲ್ಲಿ 316 ರಷ್ಟು ವಾಯು ಗುಣಮಟ್ಟ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos