ಶ್ರೀನಗರ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಶೇ.90ರಷ್ಟು ಕಲ್ಲು ತೂರಾಟ ಪ್ರಕರಣಗಳು ಇಳಿಕೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್.ಪಿ. ವೈದ್ ಅವರು ಸೋಮವಾರ ಹೇಳಿದ್ದಾರೆ.
ಕಾಶ್ಮೀರ ಪರಿಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಾಶ್ಮೀರದಲ್ಲಿ ಶೇ.90 ರಷ್ಟು ಕಲ್ಲು ತೂರಾಟ ಇಳಿಕೆಯಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಇಲ್ಲಿನ ಜನತೆ ಕೂಡ ಪ್ರಮುಖ ಪಾತ್ರವಹಿಸಿದ್ದು, ಇದರ ಇದರ ಕೀರ್ತಿಯೇನಿದ್ದರೂ ಕಾಶ್ಮೀರ ಜನತೆಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ತನಿಖಾ ದಳ ನಡೆಸುತ್ತಿರುವ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಕೇವಲ ನಾವಷ್ಟೇ ಜವಾಬ್ದಾರರಲ್ಲ. ಕಾಶ್ಮೀರ ಪರಿಸ್ಥಿತಿ ಸುಧಾರಿಸಲು ಸಾಕಷ್ಟು ಕಾರಣ, ಬೆಳವಣಿಗೆಗಳಿವೆ. ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ನಿಷೇಧ, ಪ್ರಮುಖ ಉಗ್ರ ಸಂಘಟನೆಯ ಕಮಾಂಡರ್ ಬಳ ವಿರುದ್ದ ತೆಗೆದುಕೊಂಡಿರುವ ಕ್ರಮಗಳೂ ಕೂಡ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಪ್ರತೀನಿತ್ಯ 40-50 ಕಲ್ಲು ತೂರಾಟ ಪ್ರಕರಣಗಳು ನಡೆಯುವುದು ಸಾಮಾನ್ಯವಾಗಿತ್ತು. ಆದರೆ, ಈ ವರ್ಷ ಶೇ.90 ರಷ್ಟು ಕಲ್ಲು ತೂರಾಟ ಪ್ರಕರಣಗಳು ಇಳಿಕೆಯಾಗಿದೆ. ತೂರಾಟವೇ ನಡೆದಿಲ್ಲದ ವಾರಗಳೂ ಕೂಡ ಈ ಬಾರಿ ಕಂಡು ಬಂದಿದೆ. ಕಾಶ್ಮೀರದಲ್ಲಿರುವ ಜನತೆಯ ಮನಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ ಎಂದಿದ್ದಾರೆ.