ದೇಶ

ಕೃಷ್ಣಾ ನದಿ ಬೋಟ್ ಮುಳುಗಡೆ: 19ಕ್ಕೇರಿದ ಸಾವಿನ ಸಂಖ್ಯೆ, 17 ಶವಗಳ ಪತ್ತೆ!

Srinivasamurthy VN
ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡದ ಕೃಷ್ಣ ನದಿಯಲ್ಲಿ ಭಾನುವಾರ ಸಂಭವಿಸಿದ ಬೋಟ್ ಮುಳುಗಡೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೇರಿದೆ ಎಂದು ತಿಳಿದುಬಂದಿದೆ.
ಘಟನಾ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದವರೆದಿದ್ದು, ಈ ವರೆಗೂ ರಕ್ಷಣಾ ಸಿಬ್ಬಂದಿ 17 ಶವಗಳನ್ನು ಹೊರತೆಗೆದಿದ್ದಾರೆ. ಮೂಲಗಳ ಪ್ರಕಾರ ಪ್ರವಾಸಿ ಬೋಟ್ ನಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಪ್ರಮಾಣದ ಪ್ರವಾಸಿಗರನ್ನು  ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಪ್ರಕರಣ ಸಂಬಂದ ಬೋಟ್ ಮಾಲೀಕ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಂತೆಯೇ ಪ್ರಸ್ತುತ ಓರ್ವ ವ್ಯಕ್ತಿಯನ್ನು ಪೊಲೀಸರು  ಬಂಧಿಸಿದ್ದು, ಉಳಿದ 5 ಮಂದಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಬೋಟ್ ನಲ್ಲಿ ಸುಮಾರು 35 ಮಂದಿ ಪ್ರವಾಸಿಗರೂ ಸೇರಿ ಒಟ್ಟು 38 ಮಂದಿ ಇದ್ದರು ಎಂದು ತಿಳಿದುಬಂದಿದೆ. ಬೋಟ್ ಮುಳಗಡೆಯಾಗುತ್ತಿದ್ದಂತೆಯೇ ಸಮೀಪದಲ್ಲಿದ್ದ ಮೀನುಗಾರರು ಕೂಡಲೇ ನದಿಗೆ ಧುಮುಕಿ 15 ಮಂದಿಯನ್ನು  ರಕ್ಷಿಸಿದ್ದರು.
ಸಂತ್ರಸ್ಥರಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ
ಇದೇ ವೇಳೆ ಬೋಟ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆಂಧ್ರ ಪ್ರದೇಶ ಸರ್ಕಾರ ತಲಾ 5 ಲಕ್ಷ ಪರಿಹಾರ ಧನ ನೀಡುವುದಾಗಿ ಘೋಷಣೆ ಮಾಡಿದೆ. ಅಂತೆಯೇ ಪ್ರಸ್ತುತ ಘಟನಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಎನ್ ಡಿ ಆರ್  ಎಫ್ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು, 60 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತಲ್ಲೀನರಾಗಿದ್ದಾರೆ.
ಬೋಟ್ ದುರಂತ ತೀವ್ರ ದುಃಖತಂದಿದೆ:  ಪ್ರಧಾನಿ ಮೋದಿ
ಇದೇ ವೇಳೆ ಬೋಟ್ ದುರಂತ ಸಂಬಂಧ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಬೋಟ್ ದುರಂತ ತೀವ್ರ ದುಃಖ ತಂದಿದೆ. ದೇವರು ಅವರ ಕುಟುಂಬಸ್ಥರಿಗೆ ನೋವು ತಡೆಯುವ ಶಕ್ತಿ ನೀಡಲಿ. ಎನ್ ಡಿಆರ್ ಎಫ್  ತಂಡ ಹಾಗೂ ಆಂಧ್ರ ಪ್ರದೇಶ ಸರ್ಕಾರ ಕಾರ್ಯಾಚರಣೆ ನಡೆಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
SCROLL FOR NEXT