ಜೈಪುರ: ಗೋರಕ್ಷಕರ ಹೆಸರಿನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜಸ್ತಾನ ಗೃಹ ಸಚಿವ ಗುಲಾಬ್ ಚಂದ್ ಕಠಾರಿಯಾ, ಒಂದು ವೇಳೆ ತಪ್ಪಿತಸ್ಥ ಹಿಂದೂ ಆಗಿದ್ದರೂ ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಅನುಮಾನಾಸ್ಪದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ನಾಲ್ಕು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಿಂದೂ ಆಗಿರಲಿ ಅಥವಾ ಮುಸ್ಲಿಂ ಆಗಿರಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಠಾರಿಯಾ ಹೇಳಿದ್ದಾರೆ.
ಇದೇ ವೇಳೆ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಜೊತೆಗೆ ಮತ್ತೆ ಐವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಅವರು ಹೇಳಿದ್ದಾರೆ.
ಭಾನುವಾರ ರಾಜಸ್ತಾನದ ಆಳ್ವಾರ್ ನಲ್ಲಿ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದಾರೆ ಎಂಗು ಆರೋಪಿಸಿ ಮೂವರು ಮುಸ್ಲಿಂ ಯುವಕರನ್ನು ಥಳಿಸಲಾಗಿತ್ತು, ಅದರಲ್ಲಿ ಓರ್ವನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.