ದೇಶ

ಗುಜರಾತ್: ಚುನಾವಣಾ ಜಾಹೀರಾತಿನಲ್ಲಿ 'ಪಪ್ಪು' ಪದ ಬಳಸದಂತೆ ಬಿಜೆಪಿಗೆ ಚುನಾವಣಾ ಆಯೋಗ ತಾಕೀತು

Raghavendra Adiga
ಅಹಮದಾಬಾದ್: ಗುಜರಾತ್‌ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಚುನಾವಣಾ ಆಯೋಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 'ಪಪ್ಪು' ಎಂದು ಟೀಕಿಸದಂತೆ, ಆ ಪದವನ್ನು ಚುನಾವಣಾ ಜಾಹೀರಾತಿನಲ್ಲಿ ಬಳಸದಂತೆ ಆದೇಶ ನೀಡಿದೆ.
'ಪಪ್ಪು' ಪದವನ್ನು ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿಯನ್ನು ಟೀಕಿಸಲು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.  ಇದೇ ವೇಳೆ ರಾಹುಲ್ ಅವರನ್ನು ಪಪ್ಪು ಎಂದು ಉಲ್ಲೇಖಿಸಿರುವ ಜಾಹೀರಾತನ್ನು ಬಿಡುಗಡೆಗೊಳಿಸಲು ಬಿಜೆಪಿ  ಆಯೋಗದ ಬಳಿ ಅನುಮತಿ ಕೇಳಿತ್ತು. ಆದರೆ ಆಯೋಗ ಜಾಹೀರಾತಿನಲ್ಲಿರುವ ಪಪ್ಪು ಪದವನ್ನು ತೆಗೆದುಹಾಕಿ, ಇಲ್ಲವೆ ಜಾಹೀರಾತನ್ನು ಸ್ಥಗಿತಗೊಳಿಸಿ ಎಂದು ಆದೇಶ ನೀಡಿದೆ.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಜಾಹೀರಾತು ಬಿಡುಗಡೆಗೂ ಮುನ್ನ ಚುನಾವಣಾ ಆಯೋಗದ ಪರಿಶೀಲನೆಗೆ ಒಪ್ಪಿಸಬೇಕು.ಆಯೋಗದ  ಒಪ್ಪಿಗೆ ಪಡೆದ ಬಳಿಕವೇ ಜಾಹೀರಾತನ್ನು ಬಿಡುಗಡೆ ಮಾಡಬೇಕು.  ಬಿಜೆಪಿ ಬಿಡುಗಡೆ ಮಾಡಲುದ್ದೇಶಿಸಿದ ಜಾಹೀರಾತಿನಲ್ಲಿರುವ 'ಪಪ್ಪು' ಪದ ಅವಹೇಳನಕಾರಿಯಾಗಿದೆ ಎಂದುುಲ್ಲೇಖಿಸಿದ ಆಯೋಗ ಆ ಪದಕ್ಕೆ ಕತ್ತರಿ ಹಾಕುವಂತೆ ಸೂಚಿಸಿದೆ. ಇದರ ಪ್ರಕಾರ ಬಿಜೆಪಿ ಪಕ್ಷ ಜಾಹೀರಾತಿನಲ್ಲಿದ್ದ ಆ ಪದವನ್ನು ತೆಗೆದು ಹಾಕುವುದಾಗಿ ಒಪ್ಪಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
SCROLL FOR NEXT