ನವದೆಹಲಿ: ಜಿಎಸ್ ಟಿ ಅಡಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ಶೇ.12 ರಷ್ಟು ತೆರಿಗೆ ವಿಧಿಸಿರುವುದನ್ನು ದೆಹಲಿಯ ಹೈಕೋರ್ಟ್ ಪ್ರಶ್ನಿಸಿದೆ.
ಜಿಎಸ್ ಟಿ ಅಡಿಯಲ್ಲಿ ಬಿಂದಿ, ಸಿಂಧೂರ ಇತರೆ ವಸ್ತುಗಳ ತೆರಿಗೆ ದರವನ್ನು ಇಳಿಕೆ ಮಾಡಲಾಗಿದ್ದು, ಸ್ಯಾನಿಟರಿ ನ್ಯಾಪ್ಕಿನ್ ಬೆಲೆಯನ್ನು ಇಳಿಕೆ ಮಾಡುವುದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕೆಂದು ದೆಹಲಿ ಹೈ ಕೋರ್ಟ್ ಸಲಹೆ ನೀಡಿದೆ. ಅಷ್ಟೇ ಅಲ್ಲದೇ ಶೇ.12 ರಷ್ಟು ತೆರಿಗೆ ವಿಧಿಸುವುದಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಚರ್ಚಿಸಲಾಗಿದೆಯೇ ಎಂದು ಕೋರ್ಟ್ ಪ್ರಶ್ನಿಸಿದೆ.
ಈ ಕುರಿತು ಅಫಿಡವಿಟ್ ಸಲ್ಲಿಕೆ ಮಾಡಿರುವ ಜಿಎಸ್ ಟಿ ಕೌನ್ಸಿಲ್, ಜಿಎಸ್ ಟಿ ಜಾರಿಗೆ ಬರುವುದಕ್ಕೂ ಮುನ್ನ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲಿನ ತೆರಿಗೆ ಶೇ.13 ರಷ್ಟಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಶೇ.12 ರಷ್ಟು ತೆರಿಗೆಯನ್ನು ವಿಧಿಸಲಾಗಿದೆ ಎಂದು ತಿಳಿಸಿದೆ. ನ್ಯಾಯಾಲಯ ಈ ಕುರಿತ ವಿಚಾರಣೆಯನ್ನು ಡಿ.14 ಕ್ಕೆ ಮುಂದೂಡಿದೆ.