ಶ್ರೀನಗರ: ಜಮ್ಮು-ಕಾಶ್ಮೀರ, ಪಾಕ್ ಆಕ್ರಮಿತ ಕಾಶ್ಮೀರ ವಿಷಯದಲ್ಲಿ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಈಗ ಅಂತಹದ್ದೇ ಮತ್ತೊಂದು ಹೇಳಿಕೆ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ವಶಕ್ಕೆ ಪಡೆಯುವುದಕ್ಕೆ ಅವಕಾಶ ನೀಡಲು ಪಾಕಿಸ್ತಾನವೇನು ದುರ್ಬಲ ರಾಷ್ಟ್ರವಲ್ಲ ಎಂದು ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉರಿ ಸೆಕ್ಟರ್ ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಫಾರೂಖ್ ಅಬ್ದುಲ್ಲಾ, ಇಂದು ಅವರು (ಭಾರತ) ಪಾಕ್ ಆಕ್ರಮಿತ ಕಾಶ್ಮೀರವನ್ನು ತೆಗೆದುಕೊಳ್ಳುವುದಾಗಿ ಹೇಳುತ್ತಿದೆ. ನಾವೂ ಸಹ ಪಾಕಿಸ್ತಾನದಿಂದ ಪಿಒಕೆಯನ್ನು ವಾಪಸ್ ಪಡೆಯಿರಿ ಎಂದು ಹೇಳುತ್ತಿದ್ದೇವೆ, ನಾವೂ ನೋಡೋಣ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಭಾರತಕ್ಕೆ ಬಿಟ್ಟುಕೊಡಲು ಪಾಕಿಸ್ತಾನವೇನು ದುರ್ಬಲ ರಾಷ್ಟ್ರವಲ್ಲ, ಅವರೇನು ಬಳೆ ತೊಟ್ಟಿಲ್ಲ, ಅವರ ಬಳಿಯೂ ಅಣು ಬಾಂಬ್ ಗಳಿವೆ, ಯುದ್ಧದ ಬಗ್ಗೆ ಯೋಚನೆ ಮಾಡುವುದಕ್ಕೂ ಮುನ್ನ ನಾವು ಮನುಷ್ಯರಾಗಿ ಜೀವಿಸುವುದರ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.