ದೇಶ

ಪತ್ರಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲ ರೂಪಗಳಲ್ಲಿ ಎತ್ತಿಹಿಡಿಯುವುದಕ್ಕೆ ಬದ್ಧ: ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ಪತ್ರಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲ ರೂಪಗಳಲ್ಲಿ ಎತ್ತಿಹಿಡಿಯುವುದಕ್ಕೆ ತಾವು ಸಂಪೂರ್ಣ ಬದ್ಧರಾಗಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಮಾಧ್ಯಮಗಳಿಗೆ ಶುಭಾಶಯ ಕೋರಿದ ಪ್ರಧಾನಿ, ಧ್ವನಿಯಿಲ್ಲದವರಿಗೆ ಧ್ವನಿ ನೀಡುವ ಮಾಧ್ಯಮಗಳ ಪಾತ್ರ ಶ್ಲಾಘನೀಯ ಎಂದು ಹೇಳಿದರು.
ಒಂದು ಮುಕ್ತ ಮಾಧ್ಯಮ ಸ್ಪಂದನಶೀಲ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಪತ್ರಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲ ರೂಪಗಳಲ್ಲಿ ಎತ್ತಿಹಿಡಿಯುವುದಕ್ಕೆ ತಾವು ಸಂಪೂರ್ಣ ಬದ್ಧರಾಗಿದ್ದೇವೆ. 125 ಕೋಟಿ ಭಾರತೀಯರ ಕೌಶಲ್ಯ, ಶಕ್ತಿ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚು ಹೆಚ್ಚು ತೋರಿಸುವಲ್ಲಿ ಮಾಧ್ಯಮಗಳನ್ನು ಇನ್ನಷ್ಟು ಬಳಸಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮಾಧ್ಯಮಗಳ ಕಠಿಣ ಶ್ರಮವನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ, ಮುಖ್ಯವಾಗಿ ಸುದ್ದಿಗಾರರು ಮತ್ತು ಛಾಯಾಗ್ರಾಹಕರು. ಅವರು ಕೆಳ ಹಂತದಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇವರು ಹೆಕ್ಕಿ ತರುವ ಸುದ್ದಿಗಳು ದೇಶ ಮತ್ತು ಇಡೀ ಜಗತ್ತನ್ನು ಸರಿಯಾದ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಗೆ ಮಾಧ್ಯಮಗಳು ವಿಶೇಷ ಶಕ್ತಿಯನ್ನು ತಂದಿದ್ದು ಸ್ವಚ್ಛತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ವಿಸ್ತರಿಸಿದೆ ಎಂದಿದ್ದಾರೆ.
ಮೊಬೈಲ್ ಫೋನ್ ಗಳ ಮುಖಾಂತರ ಸುದ್ದಿಗಳು ಜನರಿಗೆ ತಲುಪುವುದರಿಂದ ಮಾಧ್ಯಮ ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಇದರಿಂದ ಮಾಧ್ಯಮ ಕ್ಷೇತ್ರವನ್ನು ಇನ್ನಷ್ಟು ಪ್ರಜಾಸತ್ತಾತ್ಮಕ ಮತ್ತು ಸಹಭಾಗಿತ್ವಗೊಳಿಸಲು ಸಾಧ್ಯವಾಗಬಹುದು ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT