ರಜಪೂತ ಕರ್ಣಿ ಸೇನಾ ಸಂಘಟನೆಯ ಸ್ಥಾಪಕ ಲೋಕೇಂದ್ರ ಕಲ್ವಿ
ಪಾಟ್ನ: ವಿವಾದಿತ ಪದ್ಮಾವತಿ ಚಿತ್ರ ಬಿಡುಗಡೆ ಕುರಿತಂತೆ ಆದೇಶ ನೀಡಲು ನಟಿ ದೀಪಿಕಾ ಪಡುಕೋಣೆಯೇನು ಭಾರತದ ರಾಷ್ಟ್ರಪತಿಯಲ್ಲ ಎಂದು ರಜಪೂತ ಕರ್ಣಿ ಸೇನಾ ಸಂಘಟನೆಯ ಸ್ಥಾಪಕ ಲೋಕೇಂದ್ರ ಕಲ್ವಿಯವರು ಶುಕ್ರವಾರ ಹೇಳಿದ್ದಾರೆ.
ಪದ್ಮಾವತಿ ಚಿತ್ರ ಕುರಿತಂತೆ ಹೇಳಿಕೆ ನೀಡಿದ್ದ ದೀಪಿಕಾ ಪಡುಕೋಣೆಯವರು, ಏನೇ ಆದರೂ ಪದ್ಮಾವತಿ ಚಿತ್ರ ಬಿಡುಗಡೆಗೊಳ್ಳುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಲ್ವಿಯವರು, ರಾಣಿ ಪದ್ಮಾವತಿಯವರು ಅಲ್ಲಾವುದ್ದೀನ್ ಖಿಲ್ಜಿಯವರ ಪ್ರಿಯಕರೆಯಾಗಿದ್ದರು ಎಂಬುದನ್ನು ಯಾರು ಒಪ್ಪುತ್ತಾರೆ?... ದೀಪಿಕಾ ಪಡುಕೋಣೆ ಏನು ದೇಶದ ರಾಷ್ಟ್ರಪತಿಯಲ್ಲ. ದೀಪಿಕಾ ನಮ್ಮನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಲು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ಚಿತ್ರಕ್ಕೆ ರಾಣಿ ಪದ್ಮಾವತಿಯವರ ಹೆಸರನ್ನು ಬಳಕೆ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಅವರು, ಬನ್ಸಾಲಿಯವರನ್ನು ಎಂದಾದರೂ ನಾನು ಭೇಟಿ ಮಾಡಿದ್ದರೆ, ನನ್ನ ತಾಯಿ ಹೆಸರನ್ನು ಬಳಕೆ ಮಾಡದಿರುವಂತೆ ಹೇಳುತ್ತಿದ್ದೆ. ಪದ್ಮಾವತಿ ಹೆಸರನ್ನು ಬಳಕೆ ಮಾಡಿರುವುದನ್ನು ನಾನು ಸಹಿಸುವುದಿಲ್ಲ ಎಂದಿದ್ದಾರೆ.
ಪದ್ಮಾವತಿ ಚಿತ್ರ ವಿವಾದ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯೆಪ್ರವೇಶ ಮಾಡಬೇಕಿದ್ದು, ಚಿತ್ರ ಬಿಡುಗಡೆಯಾಗುವುದಕ್ಕೆ ಬಿಡಬಾರದು ಎಂದು ತಿಳಿಸಿದ್ದಾರೆ.