ಜಯಾ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರು ವಾಸವಿದ್ದ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಜಯಾ ಆಪ್ತೆ ಶಶಿಕಲಾ ಮತ್ತು ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ದಾಳಿ ನಡೆಸಿದ್ದ ಐಟಿ ಆಧಿಕಾರಿಗಳು 2ನೇ ಬಾರಿಗೆ ದಾಳಿ ನಡೆಸಿದ್ದು, ಈ ಬಾರಿ ಜಯಲಲಿತಾ ಅವರು ವಾಸವಿದ್ದ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಶಶಿಕಲಾ ಅವರ ಕೊಠಡಿಯಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಪ್ರಸ್ತುತ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಜಯಲಲಿತಾ ನಿಧನದ ನಂತರ ಚೆನ್ನೈನ ಪೋಯಸ್ ಗಾರ್ಡೆನ್ ನಿವಾಸದಲ್ಲಿ ವಾಸವಾಗಿದ್ದರು.ಇದೇ ಕಾರಣಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶಶಿಕಲಾ ಅವರಿದ್ದ ಎರಡು ಕೋಣೆ ಮತ್ತು ಜಯಲಲಿತಾ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಪೂನ್ ಗುಂಡ್ರನ್ ಅವರ ಕೊಠಡಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಮೂಲಗಳ ಪ್ರಕಾರ ದಾಳಿ ವೇಳೆ ಅಧಿಕಾರಿಗಳು ಒಂದು ಲ್ಯಾಪ್ಟಾಪ್, ಒಂದು ಕಂಪ್ಯೂಟರ್ ಹಾಗೂ 4 ಪೆನ್ ಡ್ರೈವ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಬೆಂಬಲಿಗರು, ನಿವಾಸದ ಎದುರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಗೆ ಮನೆಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ನಿಯಂತ್ರಿಸಿದರು.
ಕಳೆದ ವಾರವಷ್ಟೇ ಜಯಲಲಿತಾ ಅವರಿಗೆ ಸೇರಿದ್ದ ಜಯಾ ಟಿವಿ ಮೇಲೆ ಮತ್ತು ಶಶಿಕಲಾ ಸಂಬಂಧಿಗಳ ಸುಮಾರು 187 ಕಡೆಗಳಲ್ಲಿ ದಾಳಿ ಮಾಡಲಾಗಿತ್ತು.