ದೇಶ

ಬೆದರಿಕೆ ಹಾಕುವುದು ತಪ್ಪು, ಭನ್ಸಾಲಿಯದ್ದೂ ಅಷ್ಟೇ ತಪ್ಪಿದೆ: ಯೋಗಿ ಆದಿತ್ಯನಾಥ್

Lingaraj Badiger
ಲಖನೌ: ದೀಪಿಕಾ ಪಡುಕೋಣೆ ಅಭಿನಯದ ವಿವಾದಾತ್ಮಕ ಚಿತ್ರ 'ಪದ್ಮಾವತಿ' ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು,  ಚಿತ್ರದ ನಟಿಗೆ ಮತ್ತು ಇತರರಿಗೆ ಜೀವ ಬೆದರಿಕೆ ಹಾಕುವುದು ತಪ್ಪು ಮತ್ತು ಚಿತ್ರದ ನಿರ್ದೇಶಕರದ್ದೂ ಅಷ್ಟೇ ತಪ್ಪಿದೆ. ಹೀಗಾಗಿ ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಳವಾರ ಹೇಳಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ಅವರು ಜನರ ಭಾವನೆಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ ಸಿಎಂ ಯೋಗಿ, ಚಿತ್ರದಲ್ಲಿನ ಕೆಲ ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕುವವರೆಗೆ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಸಂಜಯ್ ಲೀಲಾ ಭನ್ಸಾಲಿ ಆಗಲಿ ಅಥವಾ ಇನ್ಯಾರೇ ಆಗಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ಚಿತ್ರ ತಂಡದ ಇತರರಿಗೆ ಬೆದರಿಕೆ ಹಾಕುವವರಿಗಿಂತ ಸಂಜಯ್ ಲೀಲಾ ಭನ್ಸಾಲಿ ಕಮ್ಮಿ ಅಂತ ನನಗೆ ಅನಿಸುತ್ತಿಲ್ಲ. ಒಂದು ವೇಳೆ ಬೆದರಿಕೆ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದೇಯಾದರೆ ನಿರ್ದೇಶಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಪ್ರತಿಯೊಬ್ಬರ ಭಾವನೆಗಳನ್ನು ಎಲ್ಲರೂ ಗೌರವಿಸಬೇಕು ಎಂದು ಉತ್ತರ ಪ್ರದೇಶ ಸಿಎಂ ಹೇಳಿದ್ದಾರೆ.
ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ಮತ್ತು ಶಾಹೀದ್‌ ಕಪೂರ್‌ ಅಭಿನಯದ 'ಪದ್ಮಾವತಿ' ಚಿತ್ರ ರಜಪೂತರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ರಾಣಿ ಪದ್ಮಿನಿಯ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜಕೀಯ ರಂಗು ಪಡೆಯುತ್ತಿರುವ ಈ ಚಿತ್ರದ ವಿರುದ್ಧ ಪ್ರತಿಭಟನೆಗಳು ಶುರುವಾಗಿದ್ದು, ಪದ್ಮಾವತಿ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಿದೆ.
SCROLL FOR NEXT