ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳ ವಿರೋಧದ ಹೊರತಾಗಿಯೂ ಅಂತಾರಾಷ್ಟ್ರೀಯ ನ್ಯಾಯಾಲಯದ ಚುನಾವಣೆಯಲ್ಲಿ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಅವರು ಆಶ್ಚರ್ಯಕರ ಗೆಲುವು ಸಾಧಿಸಿದ್ದರು.
ಇದು ಭಾರತದ ಅತಿದೊಡ್ಡ ರಾಜತಾಂತ್ರಿಕ ಜಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಆದರೆ ಈ ಗೆಲುವು ಭಾರತಕ್ಕೆ ಅಷ್ಟು ಸುಲಭದ್ದಾಗಿರಲಿಲ್ಲ. ಇದರ ಹಿಂದೆ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರ ಅವಿರತ ಶ್ರಮವಡಗಿದೆ ಎಂದು ಹೇಳಲಾಗಿದೆ. ಹೌದು... ಐಸಿಜೆ ಚುನಾವಣೆಯಲ್ಲಿ ಭಾರತದ ಅಭ್ಯರ್ಥಿಯ ಗೆಲುವಿಗಾಗಿ ಸುಷ್ಮಾ ಮತ್ತು ಅಕ್ಬರುದ್ದೀನ್ ಹಾಗೂ ಇತರೆ ಹಲವು ಪ್ರಮುಖ ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಗಳ ಸ್ಥಾನಕ್ಕೆ ನಡೆದ ಚುನಾವಣೆಯ ಪ್ರಕ್ರಿಯೆ ಮುಗಿಯುವವರೆಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಿದೇಶಾಂಗ ಸಚಿವಾಲಯದ ಹಲವು ಅಧಿಕಾರಿಗಳು ತಡರಾತ್ರಿವರೆಗೂ ಎಚ್ಚರವಾಗಿಯೇ ಇದ್ದರು.
ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರೊಂದಿಗೆ ಸುಷ್ಮಾನಿರಂತರ ಸಂಪರ್ಕದಲ್ಲಿದ್ದರು. ತಡರಾತ್ರಿ 2.30ಕ್ಕೆ ಅಕ್ಬರುದ್ದೀನ್ ಕರೆ ಮಾಡಿ ಭಂಡಾರಿ ಚುನಾಯಿತರಾಗಿರುವುದನ್ನು ದೃಢಪಡಿಸಿದರು. ಕೂಡಲೇ ಅವರು, ‘ವಂದೇ ಮಾತರಂ, ಜೈಹಿಂದ್’ ಎಂದು ಟ್ವೀಟ್ ಮಾಡಿ ಭಾರತದ ಗೆಲುವನ್ನು ಘೋಷಿಸಿದರು. ಆ ಮೂಲಕ ದಲ್ವೀರ್ ಭಂಡಾರಿ ಅವರ ಗೆಲುವು ಸ್ಪಷ್ಟವಾಗಿತ್ತು.
ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ಐಸಿಜೆಗೆ ಪುನರಾಯ್ಕೆಯಾಗುವ ಸಲುವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಳೆದ ಕೆಲವು ದಿನಗಳಿಂದ ಹಲವು ದೇಶಗಳ ತಮ್ಮ ವಿದೇಶಾಂಗ ಕಾರ್ಯದರ್ಶಿಗಳು ಹಾಗೂ ಸಚಿವರೊಂದಿಗೆ 60ಕ್ಕೂ ಹೆಚ್ಚು ಬಾರಿ ಕರೆ ಮಾಡಿ ಮಾತನಾಡಿ ಬೆಂಬಲ ಕೂಡ ಕೇಳಿದ್ದರು. ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಈ ನಿಟ್ಟಿನಲ್ಲಿ ಸತತ ಸಮನ್ವಯ ಕಾರ್ಯಗಳನ್ನು ನಡೆಸಿದರು. ಪರಿಣಾಮವಾಗಿ ಜಗತ್ತಿನ ಎಲ್ಲ ದೇಶಗಳು ಭಾರತದ ಪರವಾಗಿ ಮತ ಹಾಕುವಂತಾಯಿತು. ವಿದೇಶಾಂಗ ಖಾತೆ ಸಹಾಯಕ ಸಚಿವ ಎಂ.ಜೆ ಅಕ್ಬರ್ ಕೂಡ ಭಾರತದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಕ್ರಿಯವಾಗಿ ಶ್ರಮವಹಿಸಿದರು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯರ (P5) ನಡುವೆ ಒಡಕು ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಭಾರತದ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಭದ್ರತಾ ಮಂಡಳಿಯಲ್ಲಿ ಸದಾಕಾಲ ಅಡ್ಡಗಾಲು ಹಾಕುತ್ತ ಇತರರಿಗೆ ಪ್ರವೇಶವಿಲ್ಲದಂತೆ ತಡೆಯುತ್ತಿದ್ದ ಐದು ಕಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಡಕು ಮೂಡಿಸಿತ್ತು. ಅಲ್ಲದೆ ಈ ಸದಸ್ಯ ರಾಷ್ಟ್ರಗಳು ಬ್ರಿಟನ್ ಅಭ್ಯರ್ಥಿಗೆ ತಮ್ಮ ಬೆಂಬಲ ಘೋಷಿಸಿದ್ದವು.
ಶತಾಯಗತಾಯ ಗೆಲ್ಲಲೇಬೇಕೆಂದು ಹವಣಿಸಿದ್ದ ಬ್ರಿಟನ್, ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ಜಂಟಿ ಸಮಾವೇಶ ನಡೆಸಿ ಮತದಾನ ಏರ್ಪಡಿಸಬೇಕೆಂಬ ಪ್ರಸ್ತಾವ ಮುಂದಿಟ್ಟಿತು. ಇದನ್ನೇ ಮುಂದಿಟ್ಟುಕೊಂಡು ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯರಲ್ಲಿ ಒಡಕು ಮೂಡಿಸುವಲ್ಲಿ ಭಾರತದ ರಾಜತಾಂತ್ರಿಕತೆ ಯಶಸ್ವಿಯಾಯಿತು. ಪರಿಣಾಮವಾಗಿ ಬ್ರಿಟನ್ ಕಣದಿಂದ ಹಿಂದೆ ಸರಿದು ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ ಖಾತ್ರಿಯಾಯಿತು.
ಜಂಟಿ ಸಮಾವೇಶದ ಬ್ರಿಟನ್ ಪ್ರಸ್ತಾವ ಅಪ್ರಜಾಸತ್ತಾತ್ಮಕ ಎಂದು ಸಾಬೀತುಪಡಿಸುವಲ್ಲಿ ಭಾರತ ಯಶಸ್ವಿಯಾಯಿತು. ಈ ವಿಚಾರದಲ್ಲಿ ಕಾಯಂ ಸದಸ್ಯರ ಪೈಕಿ ಕೆಲವು ದೇಶಗಳು ಭಾರತದ ಪರ ನಿಂತವು. ಹೀಗಾಗಿ ಭಂಡಾರಿ ಆಯ್ಕೆ ಸುಲಭವಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.
ಇನ್ನು 1946ರ ಬಳಿಕ ಬ್ರಿಟೀಷ್ ನ್ಯಾಯಮೂರ್ತಿ ಇಲ್ಲದೇ ಐಸಿಜೆ ಪೀಠ ಪೂರ್ಣವಾಗುತ್ತಿರಲಿಲ್ಲ. ಪ್ರತೀ ಚುನಾವಣೆಯಲ್ಲೂ ಬ್ರಿಟನ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಭಾರತ ರಾಜತಾಂತ್ರಿಕತೆಯಿಂದಾಗಿ ಬ್ರಿಟನ್ ಐಸಿಜೆಯಿಂದ ದೂರ ಉಳಿಯುವಂತಾಗಿದೆ.
ಕೊನೆಯ ಗಳಿಗೆಯಲ್ಲಿ ಹಿಂದೆ ಸರಿದ ಬ್ರಿಟನ್!
ಅಂತಿಮ ಕ್ಷಣದಲ್ಲಿ ಬ್ರಿಟನ್ ತನ್ನ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ವುಡ್ ಅವರನ್ನು ಕಣದಿಂದ ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತ ರಾಜತಾಂತ್ರಿಕ ಉಪಾಯ ಮಾಡಿತ್ತು. ಅದರಂತೆ ಬ್ರಿಟನ್ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತ್ತು. ವಿಶ್ವಸಂಸ್ಥೆಯಲ್ಲಿ ಬ್ರಿಟನ್‌ನ ಕಾಯಂ ಪ್ರತಿನಿಧಿ ಮ್ಯಾಥ್ಯೂ ರೈಕ್ರಾಫ್ಟ್ ಅವರು ಚುನಾವಣೆಗೆ ಕೇವಲ ಒಂದು ಗಂಟೆ ಬಾಕಿ ಇರುವಾಗ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು. ಭಾರತ ಹಾಗೂ ಬ್ರಿಟನ್ ಮಧ್ಯೆ ನಿಕಟ ಸಂಬಂಧವಿದ್ದು, ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಬ್ರಿಟನ್ ಸರ್ಕಾರದ ವಿದೇಶಾಂಗ ನೀತಿಯ ಉದ್ದೇಶಕ್ಕೆ ಅನುಗುಣವಾಗಿ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಬೆಂಬಲ ನೀಡಲು ಕಡೇ ಗಳಿಗೆಯಲ್ಲಿ ತನ್ನ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ಹೌಸ್ ಆಫ್ ಕಾಮನ್ಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ನಿರ್ಧಾರ ಬ್ರಿಟಿಷ್ ಪ್ರಜಾಪ್ರಭುತ್ವದ ವೈಫಲ್ಯ ಅಲ್ಲ ಎಂದಿದ್ದಾರೆ.
ಐಸಿಜೆ ಚುನಾವಣೆಯಲ್ಲಿ ದಲ್ವೀರ್ ಭಂಡಾರಿ ಗೆಲುವಿಗೆ ಶ್ರಮಿಸಿದ ಸುಷ್ಮಾ ಸ್ವರಾಜ್, ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಅಕ್ಬರುದ್ದೀನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹಾಗೂ ಅಧಿಕಾರಿಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ದಲ್ವೀರ್ ಭಂಡಾರಿ ಉಪಸ್ಥಿತಿ ಭಾರತಕ್ಕೆ ಅನಿವಾರ್ಯ
ಸಾಕಷ್ಟು ವಿಚಾರಗಳಲ್ಲಿ ಭಾರತ ಪಾಕಿಸ್ತಾನ ಮತ್ತು ಚೀನಾದೊಂದಿಗೆ ತಗಾದೆ ಹೊಂದಿದೆ. ಈ ಪೈಕಿ ಬಹುತೇಕ ವಿಚಾರಗಳು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿದ್ದು, ಪಾಕಿಸ್ತಾನದೊಂದಿಗಿನ ಕುಲಭೂಷಣ್ ಜಾದವ್ ಪ್ರಕರಣ, ಚೀನಾದೊಂದಿಗಿನ ಬ್ರಹ್ಮಪುತ್ರ ನದಿ ನೀರು ಹಂಚಿಕೆ ವಿವಾದ ಸಂಬಂಧ ಭಾರತದ ವಾದ ಆಲಿಸಲು ಸೂಕ್ತ ವ್ಯಕ್ತಿಯ ಅನಿವಾರ್ಯತೆ ಭಾರತಕ್ಕೆ ಇತ್ತು. ಇದೀಗ ಅದು ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ.