ದೇಶ

ಅರ್ಧದಷ್ಟು ಸಂಪತ್ತನ್ನು ದಾನ ನೀಡಲು ನಿಲೇಕಣಿ ದಂಪತಿ ನಿರ್ಧಾರ

Raghavendra Adiga
ಬೆಂಗಳುರು: ಇನ್ಫೊಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಅವರ ಉದ್ಯಮಿ ರೋಹಿಣಿ ನಿಲೇಕಣಿ ಅವರು ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಅವರ 'ದಿ ಗಿವಿಂಗ್ ಪ್ಲೆಡ್ಜ್' ಗೆ ಸೇರ್ಪಡೆಯಾಗಿದ್ದಾರೆ. ಇದರ ಪ್ರಕಾರ ತಮ್ಮ ಸಂಪತ್ತಿನಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪಾಲನ್ನು ದಾನ ಧರ್ಮ ಕಾರ್ಯಗಳಿಗೆ ನೀಡಲು ಬದ್ದತೆ ತೋರುವ ಅಗತ್ಯವಿದೆ. 
ದಿ ಗಿವಿಂಗ್ ಪ್ಲೆಡ್ಜ್ (ದಾನ ವಾಗ್ದಾನ) ಎನ್ನುವ ಹೊಸ ಪರಂಪರೆಗೆ ನಾಂದಿ ಹಾಡಿದ ಬಿಲ್ ಗೇಟ್ಸ್ ದಂಪತಿ ಹಾಗೂ ವಾರೆನ್‌ ಬಫೆಟ್‌ ಅವರು 2010ರಲ್ಲಿ ಚಾಲನೆ ನೀಡಿದ್ದರು. ತಾವು ಗಳಿಸಿದ ಸಂಪತ್ತಿನ ಅರ್ಧಕ್ಕೂ ಹೆಚ್ಚು ಪಾಲನ್ನು ತಮ್ಮ ಜೀವಿತಾವಧಿಯಲ್ಲಿ ಅಥವಾ ಉಯಿಲಿನಲ್ಲಿ ದತ್ತಿ ಉದ್ದೇಶಕ್ಕೆ ಮೀಸಲು ಒಪ್ಪಿದವರು ಈ ವಾಗ್ದಾನಕ್ಕೆ ಸಹಿ ಹಾಕಬೇಕಿದೆ.
ಇದೀಗ ನಂದನ್ ನಿಲೇಕಣಿ ದಂಪತಿಗಳು ತಮ್ಮ ಅರ್ಧದಷ್ಟು ಸಂಪತ್ತನ್ನು ದಾನ ಮಾಡುವ ವಾಗ್ದಾನಕ್ಕೆ ಸಹಿ ಮಾಡಿದ್ದು ಆ ಪತ್ರವು 'ದಿ ಗಿವಿಂಗ್‌ ಪ್ಲೆಡ್ಜ್‌’ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿದೆ.
"ಭಗವದ್ಗೀತೆಯಿಂದ ಸ್ಫೂರ್ತಿ ಪಡೆದಿರುವ ಈ ನೈತಿಕ ಹಂಬಲವನ್ನು ಕಾರ್ಯರೂಪಕ್ಕೆ ತರಲು ಅವಕಾಶ ಒದಗಿಸಿರುವುದಕ್ಕೆ  ಬಿಲ್‌ ಗೇಟ್ಸ್‌ ಮತ್ತು ಅವರ ಪತ್ನಿ ಮಿಲಿಂದಾ ಗೇಟ್ಸ್‌  ಅವರಿಗೆ ನಾವು ಕೃತಜ್ಞರಾಗಿದ್ದೇವೆ.  ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಕರ್ತವ್ಯ ನಿಭಾಯಿಸುತ್ತಿದ್ದೇವೆ ಎನ್ನುವ ಕಾರಣಕ್ಕೆ ನಾವು ಈ ವಾಗ್ದಾನ ಮಾಡುತ್ತಿದ್ದೇವೆ" ಎಂದು ನಿಲೇಕಣಿ ದಂಪತಿಗಳು ಪತ್ರದಲ್ಲಿ ತಿಳಿಸಿದ್ದಾರೆ.ಬಿಲ್ ಗೇಟ್ಸ್ ಅವರೂ ಸಹ ಈ ದಂಪತಿಗಳ ನಿಲುವನ್ನು ಶ್ಲಾಘಿಸಿದ್ದಾರೆ.
ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್ ಷಾ ಮತ್ತು ಶೋಭಾ ಡೆವಲಪರ್ಸ್‌ನ ವಿಶ್ರಾಂತ ಅಧ್ಯಕ್ಷ ಪಿ. ಎನ್‌.ಸಿ. ಮೆನನ್‌ ಅವರುಗಳು ಬಿಲ್ ಗೇಟ್ಸ್ ಅವರ ದಾನ ವಾಗ್ದಾನ ಕ್ಕೆ ಸಹಿ ಹಾಕಿದ ಇತರೆ ಭಾರತೀಯರಾಗಿದ್ದಾರೆ.
SCROLL FOR NEXT