ಕಣ್ಣೂರಿನಲ್ಲಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ಮಹಿಳಾ ಕೆಡಿಟ್ ಗಳು.
ಕಣ್ಣೂರು: ಭಾರತೀಯ ನೌಕಾಪಡೆ ಪಾಲಿಗೆ ಇಂದು ಐತಿಹಾಸಿಕ ದಿನ. ನೌಕಾ ಪಡೆಯ ನೌಕಾ ಶಸ್ತ್ರಾಸ್ತ್ರ ಪರಿಶೀಲನಾ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಮಹಿಳಾ ನೌಕಾ ಪೈಲಟ್ ಹಾಗೂ ಅಧಿಕಾರಿಗಳ ಹುದ್ದೆಗೆ ಮೂವರು ಮಹಿಳೆಯರನ್ನು ರಕ್ಷಣಾ ಇಲಾಖೆ ನೇಮಕ ಮಾಡಿ ಆದೇಶಿಸಿದೆ.ಕೇರಳದ ಕಣ್ಣೂರಿನ ಭಾರತೀಯ ನೌಕಾಪಡೆ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾ ಪಡೆಯ 328 ಕೆಡಿಟ್ಸ್, ಭಾರತೀಯ ಕೋಸ್ಟ್ ಗಾರ್ಡ್ ಹಾಗೂ ಟಾಂಜಾನಿಯಾ ಮತ್ತು ಮಾಲ್ಡೀವ್ಸ್‌ನಲ್ಲಿ ತರಬೇತಿ ಪಡೆದ ಮಹಿಳೆಯರನ್ನು ನೌಕಾ ಪಡೆ ಪೈಲಟ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಬರೇಲಿ ಮೂಲದ ಶುಭಾಂಗಿ ಸ್ವರೂಪ್ ಭಾರತೀಯ ನೌಕಾದಳದ ಮೊದಲ ಮಹಿಳಾ ಪೈಲಟ್ ಆಗಿ ನೇಮಕವಾಗಿದ್ದಾರೆ. ಇದೇ ವೇಳೆ ನವದೆಹಲಿಯ ಆಸ್ತಾ ಸೆಗಲ್, ಪುದುಚೇರಿಯ ರೂಪಾ ಎ. ಮತ್ತು ಕೇರಳದ ಶಕ್ತಿ ಮಾಯಾ ಎಸ್. ಅವರುಗಳು ಮಹಿಳಾ ಅಧಿಕಾರಿಗಳಾಗಿ ನೇಮಕವಾಗಿದ್ದಾರೆ.
"ಮಹಿಳೆಯರನ್ನು ಉತ್ತೇಜಿಸುವ ಅವಕಾಶವನ್ನು ಈ ಕ್ರಮ ಅನುಸರಿಸಿದೆ. ಜತೆಗೆ ಇದು ಮಹತ್ವದ ಹೊಣೆಗಾರಿಕೆಯೂ ಹೌದು" ಎಂದು ಭಾರತದ ಮೊದಲ ಮಹಿಳಾ ಪೈಲಟ್ ಶುಭಾಂಗಿ ಹೇಳಿದರು. "ನೌಕಾಪಡೆಯು ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿರುವುದು ಮಹಿಳೆಗೆ ಮನ್ನಣೆ ನೀಡೀದಂತೆ" ಎಂದು ಆಸ್ತಾ ಸೆಗಲ್, ರೂಪಾ ಅವರುಗಳು ಅಭಿಪ್ರಾಯಪಟ್ಟಿದ್ದಾರೆ.
ಅಡ್ಮಿರಲ್ ಸುನಿಲ್ ಲನ್ಬಾ ಮಾತನಾಡಿ "ಭಾರತೀಯ ನೌಕಾದಳವು 1991 ರಲ್ಲಿಯೇ ಮಹಿಳೆಯರನ್ನು ಸೇನೆಗೆ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಇದೀಗ ನೇಮಕಾತಿ ಪ್ರವೇಶ ಪ್ರಕ್ರಿಯೆಯನ್ನು ವಿಸ್ತರಿಸಿದೆ" ಎಂದರು.