ಭೋಪಾಲ್: ಇತ್ತ ನಟಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ವಿವಾದಕ್ಕೀಡಾಗಿರುವಂತೆಯೇ ಅತ್ತ ಮಧ್ಯ ಪ್ರದೇಶದಲ್ಲಿ ರಾಣಿ ಪದ್ಮಾವತಿ ಕುರಿತ ಕಥೆಗಳನ್ನು ಶಾಲಾ ಮಕ್ಕಳ ಪಠ್ಯದಲ್ಲಿ ಸೇರಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಸ್ವತಃ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಸ್ಪಷ್ಟನೆ ನೀಡಿದ್ದು, ರಜಪೂತ ಮಹಾರಾಣಿ ಮತ್ತು ರಾಷ್ಟ್ರಮಾತಾ ಪದ್ಮಾವತಿ ಅವರ ಕಥೆಗಳನ್ನು ಮುಂದಿನ ವರ್ಷದಿಂದಲೇ ಜಾರಿಗೆ ಬರುವಂತೆ ಶಾಲಾ ಮಕ್ಕಳ ಪಠ್ಯದಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದರು.
ಉಜ್ಜೈನ್ ನಲ್ಲಿ ನಡೆದ ರಜಪೂತ ಸಮುದಾಯದಿಂದ ಗೌರವ ಸ್ವೀಕರಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ವಾಣ್ ಅವರು, ರಾಷ್ಟ್ರಮಾತೆ ಪದ್ಮಾವತಿ ಅವರ ನೈಜ ಕಥೆಗಳನ್ನು ಶಾಲಾ ಮಕ್ಕಳಿಗೆ ಪಠ್ಯದ ರೂಪದಲ್ಲಿ ಬೋಧನೆ ಮಾಡಲಾಗುತ್ತದೆ ಎಂದು ಹೇಳಿದರು. ಆ ಮೂಲಕ ನಮ್ಮ ಮಕ್ಕಳು ರಾಣಿ ಪದ್ಮಾವತಿಯ ಕುರಿತಾದ ತಿರುಚಿದ ಕಥೆಗಳಿಗಿಂತ ನೈಜ ಕಥೆಗಳಿಂದ ಸ್ಪೂರ್ತಿ ಪಡೆಯುತ್ತಾರೆ ಎಂದು ಹೇಳಿದರು. ಅಲ್ಲದೆ ರಾಣಿ ಪದ್ಮಾವತಿ ನೆನಪಿನಾರ್ಥವಾಗಿ ಸ್ಮಾರಕವನ್ನೂ ಕೂಡ ನಿರ್ಮಾಣ ಮಾಡುವುದಾಗಿ ಶಿವರಾಜ್ ಸಿಂಗ್ ಚೌಹ್ವಾಣ್ ಘೋಷಣೆ ಮಾಡಿದರು.
ಕಳೆದ ವಾರವಷ್ಟೇ ವಿವಾದಿತ ಪದ್ಮಾವತಿ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಶಿವರಾಜ್ ಸಿಂಗ್ ಚೌಹ್ವಾಣ್ ಅವರು, ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರಿದ್ದರು. ಚಿತ್ರವನ್ನು ನಿಷೇಧ ಮಾಡಿದ ಕ್ರಮವನ್ನು ಪ್ರಶಂಸಿಸಿ ಇಂದು ರಜಪೂತ ಸಮುದಾಯದವರು ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ರನ್ನು ಸನ್ಮಾನಿಸಿದರು.