ನವದೆಹಲಿ: ನನ್ನ ರಾಜಕೀಯ ಪ್ರವೇಶಕ್ಕೆ ನನ್ನ ಪತ್ನಿ ವಿರೋಧವಿದ್ದು, ನಾನು ಪ್ರಸ್ತುತ ರಾಜಕೀಯ ಪ್ರವೇಶ ಮಾಡುತ್ತಿಲ್ಲ ಎಂದು ಆರ್ ಬಿಐ ಮಾಜಿ ಅಧ್ಯಕ್ಷ ರಘುರಾಮ್ ರಾಜನ್ ಹೇಳಿದ್ದಾರೆ.
ರಘುರಾಮ್ ರಾಜನ್ ಅವರ ರಾಜಕೀಯ ಪ್ರವೇಶ ಕುರಿತು ಹಬ್ಬಿರುವ ಊಹಾಪೋಹಗಳ ಹಿನ್ನಲೆಯಲ್ಲಿ ಇಂದು ಸ್ಪಷ್ಟನೆ ನೀಡಿರುವ ರಘುರಾಮ್ ರಾಜನ್ ಅವರು, ನನ್ನ ರಾಜಕೀಯ ಪ್ರವೇಶದ ಕುರಿತಂತೆ ನನ್ನ ಪತ್ನಿ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾನು ರಾಜಕೀಯ ಪ್ರವೇಶ ಮಾಡುವುದು ಇಷ್ಟವಿಲ್ಲ. ಹೀಗಾಗಿ ನನ್ನ ರಾಜಕೀಯ ಪ್ರವೇಶ ಸಾಧ್ಯವಿಲ್ಲ. ಪ್ರಸ್ತುತ ನಾನು ಆರ್ಥಿಕ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹುದ್ದೆ ನನಗೆ ತೃಪ್ತಿ ನೀಡಿದೆ. ನನ್ನ ಮೆದುಳು ಸದಾಕಾಲ ಚಟುವಟಿಕೆಯಿಂದ ಇರುತ್ತದೆ. ಈ ಹುದ್ದೆಯ ವಿಶೇಷತೆಯೇ ಇದಾಗಿದ್ದು, ಇದೇ ಕಾರಣಕ್ಕೆ ನಾನು ಈ ಕ್ಷೇತ್ರವನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ರಘುರಾಮ್ ರಾಜನ್ ಅವರಿಗೆ ದೆಹಲಿಯಿಂದ ರಾಜ್ಯಸಭೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದಕ್ಕೆ ರಘುರಾಮ್ ರಾಜನ್ ಅವರು ಸ್ಪಷ್ಟವಾಗಿ ನಕಾರಾ ವ್ಯಕ್ತಪಡಿಸಿದ್ದಾರೆ. ಅಂತೆಯೇ ಜನಪ್ರಿಯತೆಗಾಗಿ ರಾಷ್ಟ್ರೀಯತೆಯ ಬಳಕೆ ದೇಶದ ಅಭಿವೃದ್ಧಿಗೆ ಮಾರಕ ಎಂದು ಪರೋಕ್ಷವಾಗಿ ರಾಜಕಾರಣಿಗಳ ವಿರುದ್ಧ ಕಿಡಿಕಾರಿದರು. ಜನರು ನಮ್ಮನ್ನು ಆರಿಸಿದ್ದು, ಜನರಿಗಾಗಿ ಮಾತ್ರ ನಾವು ಕೆಲಸ ಮಾಡಬೇಕು ಎಂಬ ಮನೋಭಾವ ರಾಜಕಾರಣಿಗಳಿಗೆ ಬರಬೇಕಿದೆ ಎಂದು ಹೇಳಿದರು.
ಜಿಎಸ್ ಟಿ ಉತ್ತಮ ಆರ್ಥಿಕ ಭವಿಷ್ಯಕ್ಕೆ ನಾಂದಿಯಾಗಲಿದೆ, ಆದರೆ ಕೆಲ ಗೊಂದಲಗಳನ್ನು ಕೂಡಲೇ ನಿವಾರಿಸಬೇಕಿದೆ
ಜಿಎಸ್ ಟಿ ಜಾರಿ ಬಗ್ಗೆ ಮಾತನಾಡಿದ ರಾಜನ್, ದೇಶದ ಉತ್ತರ ಆರ್ಥಿಕ ಭವಿಷ್ಯಕ್ಕೆ ಜಿಎಸ್ ಟಿ ನಾಂದಿಯಾಗಲಿದೆ. ಆದರೆ ಪ್ರಸ್ತುತ ಇರುವ ಕೆಲ ಗೊಂದಲಗಳನ್ನು ಕೂಡಲೇ ನಿವಾರಿಸಬೇಕಿದೆ ಎಂದು ಹೇಳಿದರು.
ಮತ್ತೊಂದು ಪುಸ್ತಕದಲ್ಲಿ ತೊಡಗಿದ್ದೇನೆ
ಇದೇ ವೇಳೆ ತಮ್ಮ ಮತ್ತೊಂದು ಪುಸ್ತಕವೊಂದನ್ನು ಹೊರತರುವ ಕುರಿತು ರಘುರಾಮ್ ರಾಜನ್ ಮಾಹಿತಿ ನೀಡಿದ್ದು, ಈ ಬಗ್ಗೆ ಕಾರ್ಯ ನಿರತನಾಗಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ರಘುರಾಮ್ ರಾಜನ್ ಅವರ "ಐ ಡು ವಾಟ್ ಐ ಡು" ಪುಸ್ತಕ ಬಿಡುಗಡೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics