ದೇಶ

ಯಾವ ಪ್ರಧಾನಿಯೂ ಇಂದಿನ ಪ್ರಧಾನಿಯಷ್ಟು ದುರ್ಬಲರಾಗಿರಲಿಲ್ಲ: ಅರುಣ್ ಶೌರಿ

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೇಖಕ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಯಾವ ಪ್ರಧಾನಿಯೂ ಇಂದಿನ ಪ್ರಧಾನಿಯಷ್ಟು ದುರ್ಬಲರಾಗಿರಲಿಲ್ಲ ಎಂದು ಹೇಳಿದ್ದಾರೆ. 
ಟೈಮ್ಸ್ ಲಿಟ್ ಫೆಸ್ಟ್ (ಟೈಮ್ಸ್ ಸಾಹಿತೋತ್ಸವ) ದಲ್ಲಿ ಎ ಫ್ಯೂ ಲೆಸನ್ಸ್ ಫಾರ್ ಫಾಲೋವರ್ಸ್ ವಿಷಯದ ಬಗ್ಗೆ ಮಾತನಾಡಿರುವ ಅರುಣ್ ಶೌರಿ, ತಾವು ಗಮನಿಸಿದ 40 ವರ್ಷಗಳ ರಾಜಕೀಯದಲ್ಲಿ ಇಂದು ನಡೆಯುತ್ತಿರುವಂತೆ ಸುಳ್ಳನ್ನು ವೈಭವೀಕರಿಸಿರುವುದನ್ನು ಕಂಡಿಲ್ಲ, ಒಂದು ಸಿದ್ಧಾಂತವನ್ನು ವಿರೋಧಿಸುತ್ತಿರುವವರನ್ನು ವಿರೋಧಿಸಬೇಕಾದರೆ ವಿರೋಧಿಗಳ ಪುಸ್ತಕವನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಅಂಬೇಡ್ಕರ್ ಹಿಂದೂ ಧರ್ಮವನ್ನು ಬೆಂಬಲಿಸುತ್ತಿದ್ದರು ಎಂಬುದನ್ನು ಹೇಳಲು ರಿಡಲ್ಸ್ ಇನ್ ಹಿಂದೂಯಿಸಂ ಪುಸ್ತಕವನ್ನು ಓದಿ ಅದರಲ್ಲಿರುವುದನ್ನೇ ವಿರೋಧಿಗಳ ಮುಂದಿಟ್ಟು ಪ್ರಶ್ನಿಸಲಾಗುತ್ತಿದೆ ಎಂದು ಶೌರಿ ಹೇಳಿದ್ದಾರೆ.  
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಅರುಣ್ ಶೌರಿ, ಹಾಲಿ ಪ್ರಧಾನಿ ಕಾರ್ಯಾಲಯದಷ್ಟು ದುರ್ಬಲ ಪ್ರಧಾನಿ ಕಾರ್ಯಾಲಯ ಹಿಂದೆಂದೂ ಇರಲಿಲ್ಲ, ಏಕೆಂದರೆ ಉನ್ನತ ಹುದ್ದೆಯಲ್ಲಿರುವವರಿಗೆ ಅಭದ್ರತೆ ಕಾಡುತ್ತಿದೆ ಎಂದು ಶೌರಿ ಹೇಳಿದ್ದಾರೆ. 
ಇನ್ನು ಭಾರತದಲ್ಲಿ ಕೋಮು ಹಿಂಸಾಚಾರ ಹೆಚ್ಚುತ್ತಿರುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ಶೌರಿ, ಇಂದು ಪ್ರತಿಯೊಂದು ಗುಂಪಿಗೂ ಕಿಚ್ಚು ಹಚ್ಚಬಹುದಾಗಿದೆ. ಹಿಂಸಾಚಾರಕ್ಕೆ ಗುಂಪುಗಳ ಅಗತ್ಯವಿಲ್ಲ, ಕಡಿಮೆ ಸಂಖ್ಯೆಯ ಜನರು ಕಿಚ್ಚು ಹಚ್ಚಿದರೆ ಸಾಕು ಹಿಂಸಾಚಾರ ಭುಗಿಲೇಳುತ್ತದೆ. 1984 ರಲ್ಲಿ ಇದೇ ರೀತಿಯಾಗಿತ್ತು. 2002 ರಲ್ಲಿ  ಇದು ಪುನರಾವರ್ತನೆಯಾಯಿತು. ಎಚ್ಚರಿಕೆಯಿಂದ ಇರದೇ ಹೋದರೆ ನಾವೂ ಇದರ ಭಾಗವಾಗಿಬಿಡುತ್ತೇವೆ ಎಂದು ಶೌರಿ ಎಚ್ಚರಿಸಿದ್ದಾರೆ. 
SCROLL FOR NEXT