ನವದೆಹಲಿ: ಪದ್ಮಾವತಿ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಮತ್ತು ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆ ಕಡಿದವರಿಗೆ 10 ಕೋಟಿ ಬಹುಮಾನ ಘೋಷಿಸಿದ್ದ ಹರಿಯಾಣ ಬಿಜೆಪಿ ಮುಖಂಡ ಸೂರಜ್ ಪಾಲ್ ಅಮೂ ರಾಜ್ಯ ಬಿಜೆಪಿ ಪಕ್ಷದ ಮಾಧ್ಯಮ ಸಂಯೋಜಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಾನು ತುಂಬಾ ನೋವಿನಿಂದ ಬಿಜೆಪಿ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ. ಹರಿಯಾಣ ಮುಖ್ಯಮಂತ್ರಿ ವರ್ತನೆ ನನಗೆ ನೋವುಂಟು ಮಾಡಿದೆ. ಪಕ್ಷದ ಕಾರ್ಯಕರ್ತರನ್ನು ಮತ್ತು ಸಮುದಾಯದ ಪ್ರತಿನಿಧಿಗಳನ್ನು ಗೌರವಿಸದ ಗಣ್ಯ ಮುಖ್ಯಮಂತ್ರಿಯನ್ನು ನಾನು ಬಿಜೆಪಿಯಲ್ಲಿ ನೋಡಿರಲಿಲ್ಲ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೀಗ ಕಾಶ್ಮೀರ ಸಮಸ್ಯೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾಗೆ ಕಪಾಳಮೋಕ್ಷ ಮಾಡಬೇಕು. ತಾಕತ್ತಿದ್ದರೆ ನನ್ನನ್ನು ಶ್ರೀನಗರದ ಹೃದಯಭಾಗದಲ್ಲಿರುವ ಲಾಲ್ ಚೌಕ್ ನಲ್ಲಿ ಭೇಟಿ ಮಾಡಿ ಎಂದು ಸವಾಲು ಆಗಿರುವ ಸೂರಜ್ ಪಾಲ್ ಇದು ನನ್ನ ಕನಸು ಎಂದು ಹೇಳಿದ್ದಾರೆ.
ಫಾರೂಕ್ ಅಬ್ದುಲ್ಲಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲ...ಮೊದಲು ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪದ್ಮಾವತಿ ಚಿತ್ರ ವಿವಾದ ಕುರಿತಂತೆ ನಟಿ ದೀಪಿಕಾ ತಲೆಗೆ 10 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಸೂರಜ್ ಪಾಲ್ ವಿರುದ್ದ ಎಫ್ಐಆರ್ ದಾಖಲಾಗಿದೆ.