ನವದೆಹಲಿ: ಸಂಸತ್ ಗಮನಕ್ಕೆ ತಾರದೇ ಸಂಸತ್ ಅನುಮೋದನೆ ಪಡೆಯದೇ ಕೇಂದ್ರ ಸರ್ಕಾರ ಬರೊಬ್ಬರಿ 4 ಸಾವಿರ ಕೋಟಿ ರು.ಗಳ ನಿಧಿಯನ್ನು ಬಿಡುಗಡೆ ಮಾಡಿರುವ ವಿಚಾರ ಇದೀಗ ಬಹಿರಂಗಗೊಂಡಿದೆ.
ಕೇಂದ್ರ ಸರ್ಕಾರದ ಡೈರಕ್ಟರ್ ಜನರಲ್ ಆಫ್ ಆಡಿಟ್ ನೀಡಿರುವ ವರದಿಯಲ್ಲಿ ಈ ಬಗ್ಗೆ ಮಾಹಿತಿ ಇದ್ದು, ಈ ಮಾಹಿತಿ ಇದೀಗ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ವರದಿಯಲ್ಲಿ ಕೇಂದ್ರ ಸರ್ಕಾರ ಜಲಸಂಪನ್ನೂಲ ಸಚಿವಾಲಯಕ್ಕೆ ಸುಮಾರು 4 ಸಾವಿರ ಕೋಟಿ ನಿಧಿ ಬಿಡುಗಡೆ ಮಾಡಿದೆ, ಆದರೆ ಈ ನಿಧಿ ಬಿಡುಗಡೆ ಸಂಬಂಧ ಕೇಂದ್ರ ಸರ್ಕಾರವಾದಲಿ ಅಥವಾ ಜಲಸಂಪನ್ಮೂಲ ಇಲಾಖೆಯಾಗಲಿ ಸಂಸತ್ ನ ಗಮನಕ್ಕೆ ತಾರದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಪ್ರಸ್ತುತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ನಿಧಿ ವಿವಿಧ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ನೀರಾವರಿ ಮತ್ತು ಒಳಚರಂಡಿ ಯೋಜನೆಗಳಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಪೈಕಿ 4 ಕೋಟಿ ಹಣವನ್ನು ಇಲಾಖೆ ವೃತ್ತಿಪರ ಸೇವೆಗಳಿಗೆ ಬಳಕೆ ಮಾಡಿಕೊಂಡಿದ್ದು, 4 ಕೋಟಿ ಹಣವನ್ನು ಕುಡಿಯುವ ನೀರಿನ ಗುಣಮಟ್ಟಕ್ಕಾಗಿ ಅಂತರರಾಷ್ಟ್ರೀಯ ಕೇಂದ್ರಕ್ಕಾಗಿ ವ್ಯಯಿಸಲಾಗಿದೆ ಎಂದು ಹೇಳಲಾಗಿದೆ. ಉಳಿದ ಹಣವನ್ನು ಈ ಎರಡು ಯೋಜನಗಳಿಗೇ ಮೀಸಲಿರಸಲಾಗಿದೆಯಾದರೂ, ಯಾವ ಕಾರಣಕ್ಕಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದನ್ನು ವಿವರಿಸಲಾಗಿಲ್ಲ.
ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ಮುನ್ನ ಸಂಸತ್ ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಂತೆಯೇ .ಯಾವ ಕಾರಣಕ್ಕೆ ಹಣ ಬಿಡುಗಡೆ ಮಾಡುತ್ತಿದ್ದೇನೆ ಎಂಬುದನ್ನು ಸಂಸತ್ ಗೆ ಮನವರಿಕೆ ಮಾಡಕೊಟ್ಟು ಅಲ್ಲಿ ಅನುಮೋದನೆ ಪಡೆದು ಬಳಿಕ ಯೋಜನೆಗಳಿಗೆ ನಿಧಿ ಬಿಡುಗಡೆ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಯಾವುದೇ ನಿಯಮವನ್ನೂ ಪಾಲಿಸದೇ ಬರೊಬ್ಬರಿ 4 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಹಣವಿಲ್ಲ ಎಂಬ ಒಂದೇ ಕಾರಣಕ್ಕೆ ಯೋಜನೆಗಳಿಗೆ ಹಿನ್ನಡೆಯಾಬಾರದು: ಕೇಂದ್ರ ಸರ್ಕಾರ
ಇನ್ನು ಪ್ರಸ್ತುತ ಬಹಿರಂಗವಾಗಿರುವ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಅತ್ಯಾವಶ್ಯಕ ಯೋಜನೆಗಳು ಕೇವಲ ಹಣವಿಲ್ಲ ಎಂಬ ಒಂದೇ ಕಾರಣಕ್ಕಾಗಿ ನಿಲ್ಲಬಾರದು. ಇದೇ ಕಾರಣಕ್ಕೆ ತಾನು ಜಲಸಂಪನ್ಮೂಲ ಇಲಾಖೆಗೆ ಹಣ ಬಿಡುಗಡೆ ಮಾಡಿರುವುದಾಗಿ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವಾಲಯ ಕೂಡ ಸ್ಪಷ್ಟನೆ ನೀಡಿದ್ದು, ತನಗೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದ್ದು, ಯಾವುದೇ ಕಾರಣಕ್ಕೂ ಅಗತ್ಯ ಮೂಲಸೌಕರ್ಯ ಯೋಜನೆಗಳಿಗೆ ತಡೆಯಾಗಬಾರದು ಎಂದು. ಯೋಜನೆಗಳಿಗೆ ಅಡ್ಡಿಯಾಗುವ ಎಲ್ಲ ಅಡೆತಡೆಗಳನ್ನೂ ನಿವಾರಿಸುವಂತೆ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ ಎಂದು ಹೇಳಿದೆ.