ದೇಶ

ಒಕ್ಙಿ ಚಂಡಮಾರುತ: ರಕ್ಷಣಾ ಕಾರ್ಯಾಚರಣೆ ನೌಕಾದಳ ಬೋಟ್ ಗಳ ರವಾನೆ!

Srinivasamurthy VN
ಚೆನ್ನೈ: ಲಕ್ಷ ದ್ವೀಪದತ್ತ ಸಾಗಿರುವ ಒಕ್ಹಿ ಚಂಡಮಾರುತ ಈಗಾಗಲೇ ತಮಿಳುನಾಡು ಮತ್ತು ಕೇರಳದಲ್ಲಿ ವ್ಯಾಪಕ ಪರಿಣಾಮ ಬೀರುತ್ತಿದ್ದು, ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಭಯ ರಾಜ್ಯಗಳ ಕರಾವಳಿ  ತೀರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಇನ್ನು ನೈಸರ್ಗಿಕ ವಿಕೋಪ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಈಗಾಗಲೇ ದಕ್ಷಿಣ ಭಾರತದ ಎರಡು ರಾಜ್ಯಗಳಿಗೆ ಎನ್ ಡಿಆರ್ ಎಫ್ ತಂಡಗಳನ್ನು ರವಾನಿಸಿದೆ. ಎನ್ ಡಿಆರ್ ಎಫ್ ನ ನೂರಾರು ಸಿಬ್ಬಂದಿಗಳು  ಉಭಯ ರಾಜ್ಯಗಳಲ್ಲಿ ನೆಲೆಯೂರಿದ್ದು, ಯಾವುದೇ ರೀತಿಯ ಪರಿಸ್ಥಿತಿ ನಿಭಾಯಿಸಲು ಸರ್ವ ಸನ್ನದ್ಧರಾಗಿದ್ದಾರೆ. ಇನ್ನು ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಕೇರಳ ಮತ್ತು ತಮಿಳುನಾಡಿನಲ್ಲಿ ರಕ್ಷಣಾ  ಕಾರ್ಯಾಚರಣೆ ನಡೆಸಲು ನೌಕಾದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 
ಇನ್ನು ಲಕ್ಷದ್ವೀಪದಲ್ಲಿ ಸಿಜಿಎಸ್ ಸಮರ್ಥ್ ಸೇರಿದಂತೆ ಒಟ್ಟು 2 ನೌಕೆಗಳನ್ನು ನಿಯೋಜಿಸಲಾಗಿದ್ದು, ಕೇರಳದ ಕೊಚ್ಚಿಯಲ್ಲಿ 2 ನೌಕೆಗಳನ್ನು ನಿಯೋಜಿಸಲಾಗಿದೆ. ಅಂತೆಯೇ ಕೊಚ್ಚಿ ಮತ್ತು ಟುಟಿಕೊರಿನ್ ನಲ್ಲಿ 2 ಐಸಿಜಿ ನೌಕೆಗಳನ್ನು  ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಲಾಗಿದೆ. ಇದಲ್ಲದೆ ತುರ್ತು ಅಗತ್ಯ ವಸ್ತುಗಳ ಪೂರೈಕೆಗಾಗಿ ಪಿ81 ವಿಮಾನ, ನೌಕಾದಳದ 2 ಡಾರ್ನಿಯರ್ ವಿಮಾನ ಹಾಗೂ ಸಮುದ್ರ ಶೋಧಕ್ಕಾಗಿ ಒಂದು ಶೋಧಕ ವಿಮಾನ ಹಾಗೂ  ಒಂದು ಹೆಲಿಕಾಪ್ಟರ್ ಅನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಅಲ್ಲದೆ ಸುಮಾರು 25ಕ್ಕೂ ಹೆಚ್ಚು ನುರಿತ ಮುಳುಗು ತಜ್ಞರನ್ನು ಕೂಡ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನುಳಿದಂತೆ ಭಾರಿ ಮಳೆ ಮುಂದುವರೆದಿರುವ ಪರಿಣಾಮ ಚೆನ್ನೈ, ಕನ್ಯಾಕುಮಾರಿ, ಟ್ಯುಟಿಕೊರಿನ್, ಕಾಂಚಿಪುರಂ, ಮಧುರೈ, ವಿಳ್ಳುಪುರಂ, ಥೇಣಿ, ತಂಜಾವೂರು ಮತ್ತು ತಿರುವರೂರು ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ  ಮುಂದುವರೆಸಲಾಗಿದೆ.
SCROLL FOR NEXT