ಕೋಜಿಕೋಡ್ ನಲ್ಲಿ ಅಪಾಯಕ್ಕೆ ಸಿಲುಕಿದ ಬೋಟ್
ಚೆನ್ನೈ: ‘ಒಖಿ’ಚಂಡಮಾರುತ ತಮಿಳುನಾಡು ಹಾಗೂ ಕೇರಳದ ಕರಾವಳಿ ತೀರದಲ್ಲಿ ಭಾರಿ ಹಾನಿಯುಂಟು ಮಾಡಿದ್ದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಚಂಡಮಾರುತ್ತಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರ ಐದಕ್ಕೆ ಏರಿಕೆಯಾಗಿದೆ.
ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ತಲಾ 4 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ನೆರೆಯ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ನಿರ್ದೇಶಕ ಎಸ್ ಬಾಲಚಂದ್ರನ್ ಅವರು ಹೇಳಿದ್ದಾರೆ. ಅಲ್ಲದೆ ಮುಂದಿನ ನಾಲ್ಕು ದಿನಗಳಲ್ಲಿ ‘ಒಖಿ’ಚಂಡಮಾರುತ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಯನ್ನು ತಲುಪಲಿದೆ ಎಂದು ತಿಳಿಸಿದ್ದಾರೆ.
ಚಂಡಮಾರುತ ಅಬ್ಬರಕ್ಕೆ ಕೇರಳದಲ್ಲಿ ನಾಲ್ವರು ಮೃತಪಟ್ಟಿದ್ದು, ಮುಂದಿನ 24 ಗಂಟೆಗಳಲ್ಲಿ ಕರಾವಳಿ ತೀರ ಸೇರಿದಂತೆ ಕೇರಳದ ಹಲವೆಡೆ ಭಾರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ತಮಿಳುನಾಡು ಹಾಗೂ ಕೇರಳದ ಕರಾವಳಿ ತೀರ ಹಾಗೂ ಲಕ್ಷದ್ವೀಪ ಸಮೂಹದಲ್ಲಿ ಅಪಾಯದಲ್ಲಿದ್ದ 150 ಮೀನುಗಾರರನ್ನು ಭಾರತೀಯ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆ, ವಾಯುಪಡೆ ರಕ್ಷಣೆ ಮಾಡಿವೆ.
ನೆರೆಯ ಎರಡೂ ರಾಜ್ಯಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಬೆನ್ನಲ್ಲೆ, ರಾಜ್ಯದ ಬೆಂಗಳೂರು ಸೇರಿದಂತೆ ಮಂಡ್ಯ, ರಾಮನಗರದಲ್ಲಿ ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದು, ತುಂತುರು ಮಳೆ ಬಿದ್ದಿದೆ.