ದೇಶ

'ಒಕ್ಹಿ' ಚಂಡಮಾರುತ ಎಫೆಕ್ಟ್; ತಮಿಳುನಾಡಿನಲ್ಲಿ ಭಾರಿ ಮಳೆ, 8 ಸಾವು

Srinivasamurthy VN
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ಒಕ್ಹಿ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಈ ವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಲಕ್ಷದ್ವೀಪದತ್ತ ಸಾಗುತ್ತಿರುವ ಒಕ್ಹಿ ಚಂಡಮಾರುತದ ಪರಿಣಾಮ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟು 8 ಮಂದಿ  ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ತಮಿಳುನಾಡು ಹಾಗೂ ಕೇರಳದಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡಿನಲ್ಲಿ ನಾಲ್ವರು ಮೃತಪಟ್ಟರೆ, ಕೇರಳದಲ್ಲಿ ಆಟೋ ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ, ಚಾಲಕ ಅಸುನೀಗಿದ್ದಾರೆ. ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರುಧುನಗರ ಸಹಿತ 7 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕನ್ಯಾಕುಮಾರಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಮರಗಳು ಧರೆಗುಳಿದಿದ್ದು, ಹಲವಾರು ಮನೆ, ಕಟ್ಟಡಗಳಿಗೆ ಹಾನಿಯಾಗಿದೆ. ಇನ್ನೊಂದೆಡೆ, ಬುಧವಾರ ರಾತ್ರಿ ಮೀನುಗಾರಿಕೆಗೆಂದು ಸಮುದ್ರಕ್ಕಿಳಿದಿದ್ದ 13 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ ಡಿಆರ್‌ ಎಫ್)ಯ 2 ತಂಡ ಗಳು (60 ಮಂದಿ) ಈಗಾಗಲೇ ಕನ್ಯಾಕುಮಾರಿಯನ್ನು ತಲುಪಿದ್ದು, 47 ಮಂದಿಯ ಇನ್ನೊಂದು ತಂಡವನ್ನು ಕೇರಳದ ಕೊಚ್ಚಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
SCROLL FOR NEXT