ಪತಾಂಜಲಿ ಕಂಪನಿಯ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್'ದೇವ್
ನವದೆಹಲಿ: ಚಿಕಿತ್ಸೆಗಾಗಿ ಮುಸ್ಲಿಮರೂ ಗೋಮೂತ್ರವನ್ನು ಬಳಸಬಹುದು ಎಂದು ಪತಾಂಜಲಿ ಕಂಪನಿಯ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್'ದೇವ್ ಅವರು ಸೋಮವಾರ ಹೇಳಿದ್ದಾರೆ.
ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಚಿಕಿತ್ಸೆಗಾಗಿ ಗೋಮೂತ್ರ ಬಳಸಬಹುದು ಎಂದು ಕುರ್'ಆನ್'ನಲ್ಲಿ ಉಲ್ಲೇಖಿಸಲಾಗಿದೆ. ಕೆಲವರು ಪತಾಂಜಲಿಯನ್ನು ಹಿಂದೂ ಕಂಪನಿ ಎಂದು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ನಾನು ಎಂದಾದರೂ ಹಮ್'ದರ್ದ್ (ಮುಸ್ಲಿಮರು ಸ್ಥಾಪಿಸಿದ ಕಂಪನಿ)ಅನ್ನು ಗುರಿಯಾಗಿರಿಸಿದ್ದೇನೆಯೇ ಎಂದು ಪ್ರಶ್ನಿಸಿದ್ದಾರೆ.
ಹಮ್'ದರ್ದ್ ಮತ್ತು ಹಿಮಾಲಯ ಔಷಧ ಕಂಪನಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಹಿಮಾಲಯ ಗುಂಪಿನ ಫಾರೂಕ್ ಭಾಯಿ ಯೋಗ ಗ್ರಾಮವನ್ನು ಸ್ಥಾಪಿಸುವುದಕ್ಕಾಗಿ ನನಗೆ ಭೂಮಿ ದಾನ ಮಾಡಿದ್ದಾರೆ. ಆರೋಪಗಳನ್ನು ಮಾಡುತ್ತಿರುವ ಜನರು ದ್ವೇಷದ ಗೋಡೆಯನ್ನು ಮಾತ್ರ ನಿರ್ಮಿಸಬಲ್ಲರು ಎಂದು ಹೇಳಿದ್ದಾರೆ.
ರೂ.10 ಸಾವಿರ ಕೋಟಿ ಪತಾಂಜಲಿ ಗುಂಪಿಗೆ ಉತ್ತರಾಧಿಕಾರಿಯನ್ನು ರೂಪಿಸಲು ಚಿಂತಿಸುತ್ತಿದ್ದೇನೆ. ನನ್ನಿಂದ ತರಬೇತಿ ಪಡೆದ 500 ಸಾಧುಗಳ ತಂಡ ಉತ್ತರಾಧಿಕಾರಿಯಾಗಲಿದ್ದಾರೆ. ಉತ್ತರಾಧಿಕಾರಿಯು ಉದ್ಯಮಿ ಅಥವಾ ಲೌಕಿಕ ವ್ಯಕ್ತಿಯಾಗಿರಬಾರದು. ನಾನು ಎಂದಿಗೂ ಸಂಕುಚಿತವಾಗಿ ಚಿಂತಿಸುವುದಿಲ್ಲ. ವಿಶಾಲವಾಗಿ ಚಿಂತಿಸುತ್ತೇನೆ. 500 ವರ್ಷದ ಬಳಿಕದ ನನ್ನ ದೇಶದ ಬಗ್ಗೆ ನಾನು ಚಿಂತಿಸುತ್ತೇನೆ. ಮುಂದಿನ 100 ವರ್ಷಗಳ ಪತಾಂಜಲಿ ಗುಂಪಿನ ಬಗ್ಗೆ ನಾನು ಚಿಂತಿಸುತ್ತೇನೆ. ನಾನು ಹೋಗುವಾಗ ನನ್ನ ಉತ್ತರಾಧಿಕಾರಿಯನ್ನು ಬಿಟ್ಟು ಹೋಗುತ್ತೇನೆಂದು ತಿಳಿಸಿದ್ದಾರೆ.