ಎಐಎಡಿಎಂಕೆ ಪಕ್ಷ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್
ಚೆನ್ನೈ: ಅನಾರೋಗ್ಯಕ್ಕೀಡಾಗಿರುವ ಪತಿ ಎಂ. ನಟರಾಜನ್ ಅವರನ್ನು ಭೇಟಿ ಮಾಡುವ ಸಲುವಾಗಿ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆಂದು ಎಐಎಡಿಎಂಕೆ ಪಕ್ಷ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಅನಾರೋಗ್ಯದಿಂದ ಬಳಲುತ್ತಿರುವ ಎಂ. ನಟರಾಜನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಭೇಟಿ ಮಾಡುವ ಸಲುವಾಗಿ ಶಶಿಕಲಾ ಅವರು 15 ದಿನಗಳ ಪೆರೋಲ್ ಗಾಗಿ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆಂದು ಹೇಳಿದ್ದಾರೆ.
ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕುರಿತಂತಿರುವ ವಿಡಿಯೋವನ್ನು ಸಲ್ಲಿಕೆ ಮಾಡುವಂತೆ ನ್ಯಾಯಾಂಗ ಆಯೋಗ ಕೇಳಿದರೆ, ವಿಡಿಯೋವನ್ನು ಸಲ್ಲಿಸುತ್ತೇವೆ. ಹಾಗೂ ವಿಡಿಯೋವನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ದಿನಕರನ್ ಅವರು, ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ನಂತರ ತೆಗೆದ ವಿಡಿಯೋ ಶಶಿಕಲಾ ಅವರ ಬಳಿ ಇದ್ದು, ಅದನ್ನು ತನಿಖಾ ಸಂಸ್ಥೆಗೆ ನೀಡುತ್ತೇನೆ. ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೂ ದಿಂಡಿಗಲ್ ಶ್ರೀನಿವಾಸನ್ ಸೇರಿದಂತೆ ಕೆಲವು ನಾಯಕರು ಯೂ ಟರ್ನ್ ಹೊಡೆಯುತ್ತಿರುವುದರಿಂದ ಜನ ನಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಮ್ಮ ಸಾವಿನ ನಂತರ ಅವರು ಹೇಗೆ ತಮ್ಮ ನಿಷ್ಠೆ ಬದಲಿಸಿದ್ದಾರೆ ಎಂಬುದು ಆ ವಿಡಿಯೋ ನೋಡಿದರೆ ಗೊತ್ತಾಗುತ್ತೆ ಎಂದು ಹೇಳಿದ್ದರು.