ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜವಡೇಕರ್ ಅವರ ಹೇಳಿಕೆ ಕೇವಲ ಪ್ರಚಾರ ತಂತ್ರವಷ್ಟೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಹೇಳಿದ್ದಾರೆ.
ಈ ಹಿಂದೆ ಸಿಪಿಐ ವಿರುದ್ಧ ಕಿಡಿಕಾರಿದ್ದ ಕೇಂದ್ರ ಸಚಿವ ಜವಡೇಕರ್ ಅವರು, ಸಿಪಿಐ(ಎಂ) ಪಕ್ಷವನ್ನು ಕಮ್ಯೂನಿಸ್ಟ್ ಪಕ್ಷ-ಮಾವೋವಾದಿ ಎಂದು ಹೇಳಿದ್ದರು.
ಜವಡೇಕರ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಕಾರಿರುವ ಪಿಣರಾಯಿ ವಿಜಯನ್ ಅವರು, ಜವಡೇಕರ್ ಅವರ ಹೇಳಿಕೆ ಕೇವಲ ಪ್ರಚಾರ ತಂತ್ರವಷ್ಟೇ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶೀಘ್ರದಲ್ಲಿಯೇ ಕೇರಳದಲ್ಲಿ ರ್ಯಾಲಿ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜವಡೇಕರ್ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂದು ಹೇಳಿದ್ದಾರೆ.
ಕೇರಳ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷವನ್ನು ಮಾವೋವಾದಿಗಳ ಪಕ್ಷವೆಂದು ಕರೆದಿರುವ ಕೇಂದ್ರ ಸಚಿವರ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೇರಳ ಸರ್ಕಾರ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆ ತಿರುಗೇಟು ನೀಡಿದ್ದ ಪಿಣರಾಯಿ ವಿಜಯನ್ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿ ವಸಾಹತುಶಾಹಿ ಬ್ರಿಟೀಷರಿಗೆ ಸೇವೆ ಸಲ್ಲಿಸಿದ ಆರ್ಎಸ್ಎಸ್ ನಿಂದ ಕೇರಳಿಗರು ರಾಷ್ಟ್ರೀಯತೆಯ ಪಾಠ ಕಲಿಯಬೇಕಾಗಿಲ್ಲ ಎಂದು ಕಿಡಿಕಾರಿದ್ದರು.