ದೇಶ

ಶ್ರೀನಗರ ದಾಳಿ ನಡೆಸಿದ್ದು ನಾವೇ: ಪಾಕ್ ಮೂಲದ 'ಜೈಷ್ ಇ ಮೊಹಮದ್' ಉಗ್ರ ಸಂಘಟನೆ ಹೇಳಿಕೆ

Srinivasamurthy VN
ಶ್ರೀನಗರ: ಶ್ರೀನಗರ ವಿಮಾನ ನಿಲ್ದಾಣ ಸಮೀಪವಿರುವ ಬಿಎಸ್ ಎಫ್ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿ ನಡೆಸಿದ್ದು ನಾವೇ ಎಂದು ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಜೈಷ್ ಇ ಮೊಹಮದ್ ಹೇಳಿಕೊಂಡಿದೆ.
ಇಂದು ಮುಂಜಾನೆ ನಡೆದ ಉಗ್ರರ ದಾಳಿಯಿಂದಾಗಿ ಈ ವರೆಗೂ ಓರ್ವ ಉಗ್ರ ಹತಾತ್ಮನಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಗಾಯಗೊಂಡ ಯೋಧರನ್ನು ಸೇನಾಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ದಾಳಿ ನಡೆದ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದೆ. ಒಟ್ಟು ಮೂರು ಮಂದಿ ಉಗ್ರರ ತಂಡ ದಾಳಿ ಮಾಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಈ ಪೈಕಿ 2 ಮಂದಿ  ಉಗ್ರರನ್ನು ಈಗಾಗಲೇ ಯೋಧರು ಹೊಡೆದುರುಳಿಸಿದ್ದಾರೆ. ಇನ್ನೂ ಒಬ್ಬ ಅಥವಾ ಅದಕ್ಕಿಂತ ಹೆಚ್ಚು ಉಗ್ರರು ಅವಿತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಸೈನಿಕರು ಶೋಧ ಕಾರ್ಯ ಆರಂಭಿಸಿದ್ದಾರೆ.

ಸೇನಾ ಮೂಲಗಳ ಪ್ರಕಾರ ಉಗ್ರ ನಿಗ್ರಹ ಕಾರ್ಯಾಚರಣೆ ಅಂತಿಮ ಹಂತದಲ್ಲಿದ್ದು, ಅವಿತಿರುವ ಓರ್ವ ಉಗ್ರನನ್ನು ಹೊಡೆದುರುಳಿಸಿ ಕ್ಯಾಂಪ್ ನಲ್ಲಿ ಶೋಧ ಕಾರ್ಯ ನಡೆಸಲಾಗುತ್ತದೆ. ಅಂತೆಯೇ ಉಗ್ರರು ಅವಿತಿರುವ ಕಟ್ಟಡವನ್ನು  ಬಿಎಸ್ಎಫ್, ಸಿಆರ್ ಪಿಎಫ್, 53 ರಾಷ್ಟ್ರೀಯ ರೈಫಲ್ಸ್ ಮತ್ತು ಸ್ಪೆಷಲ್ ಆಪರೇಷನ್ಸ್ ಗ್ರೂಪ್ (ಎಸ್ಒಜಿ) ದಳದ ತುಕಡಿಗಳು ಸುತ್ತುವರೆದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಉರಿ ಉಗ್ರ ದಾಳಿ ಬಳಿಕ ನಡೆದ ದೊಡ್ಡ ಪ್ರಮಾಣದ ಉಗ್ರ ದಾಳಿ ಇದಾಗಿದ್ದು, ಯೋಧರ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬೇಕಿದ್ದ ದೊಡ್ಡ ದುರಂತ ತಪ್ಪಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದೆ. ಇನ್ನು  ದಾಳಿಯಿಂದಾಗಿ ಯಾವುದೇ ಸ್ಥಳೀಯ ನಾಗರಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದೂ ಸೇನೆ ಸ್ಪಷ್ಟಪಡಿಸಿದೆ.

ಇನ್ನು ಮುಂಜಾಗ್ರತಾ ಕ್ರಮವಾಗಿ ಶ್ರೀನಗರದಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದ್ದು, ಶ್ರೀನಗರದಿಂದ ಬೇರೆ ಜಿಲ್ಲೆಗಳಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಕಟ್ಟೆಚ್ಚರದಿಂದ ಶೋಧ ನಡೆಸಲಾಗುತ್ತಿದೆ.
SCROLL FOR NEXT