ಗಡಿ ಭದ್ರತಾ ಪಡೆಯ ಡಿಜಿ ಕೆ.ಕೆ. ಶರ್ಮಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬುಧವಾರ ಎಚ್ಚರಿಕೆಯನ್ನು ರವಾನಿಸಿದೆ.
ಶ್ರೀನಗರ ವಿಮಾನ ನಿಲ್ದಾಣದ ಬಳಿಯಿರುವ ಬಿಎಸ್ಎಫ್ ಕ್ಯಾಂಪ್ ಮೇಲೆ ನಿನ್ನೆಯಷ್ಟೇ ಜೈಷ್-ಇ-ಮೊಹಮ್ಮದ್ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಬಿಎಸ್ಎಫ್ ಅಧಿಕಾರಿ ಬಿಕೆ. ಯಾದವ್ ಅವರು ಹುತಾತ್ಮರಾಗಿದ್ದರು.
ಹುತಾತ್ಮ ಯೋಧ ಯಾದವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಗಡಿ ಭದ್ರತಾ ಪಡೆಯ ಡಿಜಿ ಕೆ.ಕೆ. ಶರ್ಮಾ ಅವರು, ನೆರೆರಾಷ್ಟ್ರ ಈ ರೀತಿಯ ಉದ್ಧಟತನ ಪ್ರದರ್ಶಿಸುವುದು ಸರಿಯಲ್ಲ. ಪಾಕಿಸ್ತಾನದ ಉಗ್ರರು ಭಾರತದ ಮೇಲೆ ಮತ್ತಷ್ಟು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಬಿಎಸ್ಎಫ್ ಕ್ಯಾಂಪ್ ನಲ್ಲಿ ಇರಿಸಲಾಗಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ಸಾಮಾಗ್ರಿಗಳನ್ನು ಉಗ್ರರು ಗುರಿ ಮಾಡಿಕೊಂಡಿದ್ದರು ಎಂದು ಶಂಕಿಸಲಾಗಿದೆ. ಯೋಧರ ಕ್ಷಿಪ್ರ ಕಾರ್ಯಾಚರಣೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ. ಬಿಎಸ್ಎಫ್ ಯೋಧರ ಶಿಸ್ತು, ತರಬೇತಿ ಮತ್ತು ಶೌರ್ಯಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
ಆತ್ಮಹತ್ಯಾ ದಾಳಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಇದಕ್ಕೆ ಯಾವ ರೀತಿಯಲ್ಲಿ ದಿಟ್ಟ ಉತ್ತರವನ್ನು ನೀಡುತ್ತೇವೆ ಎಂಬುದು ಮುಖ್ಯವಾಗಿದೆ. ಯಾವುದೇ ಅನಾಹುತ, ದುರಂತ ಹಾಗೂ ನಷ್ಟಗಳು ಸಂಭವಿಸದ ರೀತಿಯಲ್ಲಿ ಉಗ್ರರನ್ನು ನಾವು ಹತ್ಯೆ ಮಾಡಿದ್ದೇವೆ. ಬಿಎಸ್ಎಫ್ ಪಡೆಗಳು ಉತ್ತಮ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸಿವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬಿಎಸ್ಎಪ್ ಕ್ಯಾಂಪ್ ಮೇಲೆ ದಾಳಿ ನಡೆಸಿ, ಆತ್ಮಾಹುತಿ ದಾಳಿ ನಡೆಸಲು ಮುಂದಾಗಿದ್ದ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಯತ್ನವನ್ನು ಭಾರತೀಯ ಸೇನೆ ನಿನ್ನೆ ವಿಫಲಗೊಳಿಸಿತ್ತು.