ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಆಪ್ತೆ ಹಾಗೂ ದತ್ತು ಪುತ್ರಿ ಎನ್ನಲಾಗುತ್ತಿರುವ ಹನಿಪ್ರೀತ್ ಇನ್ಸಾನ್ ರನ್ನು ಪಂಚಕುಲ ಕೋರ್ಟ್ ಆರು ದಿನ ಹರಿಯಾಣ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಅತ್ಯಾಚಾರಿ ಬಾಬಾ ಜೈಲು ಪಾಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಹನಿಪ್ರೀತ್ ಳನ್ನು ಸುಮಾರು ಒಂದು ತಿಂಗಳ ನಂತರ ನಿನ್ನೆ ಪಂಜಾಬ್ ನ ಜಿರ್ಕಾಪುರ್ -ಪಟಿಯಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣ ಪೊಲೀಸರು ಬಂಧಿಸಿದ್ದರು. ಇಂದು ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದರು. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಹನಿಪ್ರೀತ್ ಳನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ಪೊಲೀಸ್ ವಶಕ್ಕೆ ನೀಡಲು ಆರೋಪಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆರೋಪಿ ಹನಿಪ್ರೀತ್ ಳನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
41 ಮಂದಿಯನ್ನು ಬಲಿ ಪಡೆದ ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ ಹನಿಪ್ರೀತ್ ಪಾತ್ರವಿದೆ ಮತ್ತು ಡೇರಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಆಕೆಯ ಬಳಿ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ದೋಷಿ ಎಂದು ಘೋಷಿಸಿದ ಬಳಿಕ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಪ್ರೀತ್ ವಿರುದ್ಧ ಹರಿಯಾಣ ಪೊಲೀಸರು ರಾಜ್ಯ ದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.