ಅಹಮದಾಬಾದ್ ನ ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಮಾಜಿ ಕಾಂಗ್ರೆಸ್ ಸಂಸದ ಇಹ್ಸಾನ್ ಜಫ್ರಿ ಅವರ ಪತ್ನಿ ಜಕಿಯಾ ಜಫ್ರಿ (ಸಂಗ್ರಹ ಚಿತ್ರ)
ಅಹಮದಾಬಾದ್: ಗುಜರಾತ್ ಹೈಕೋರ್ಟ್ ಇಂದು ಗುಜರಾತ್ ನ ಕಾಂಗ್ರೆಸ್ ಸಂಸದ ಇಹ್ಸಾನ್ ಜಫ್ರಿ ಅವರ ಪತ್ನಿ ಜಕಿಯಾ ಜಫ್ರಿ ಅವರ ಮನವಿಯನ್ನು ತಿರಸ್ಕರಿಸಿದೆ.
2002ರ ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗಳಿಗೆ ಪಿತೂರಿ ನಡೆಸಿದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರರಿಗೆ ಕ್ಲೀನ್ ಚಿಟ್ ನೀಡಿದ ವಿಶೇಷ ತನಿಖಾ ತಂಡದ ಆದೇಶವನ್ನು ಎತ್ತಿಹಿಡಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಝಕಿಯಾ ಜಫ್ರಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಆದರೆ ಕೇಸಿಗೆ ಸಂಬಂಧಪಟ್ಟಂತೆ ಮುಂದಿನ ತನಿಖೆಗೆ ಮೇಲಿನ ಹಂತದ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಝಕಿಯಾಗೆ ಹೈಕೋರ್ಟ್ ಅವಕಾಶ ನೀಡಿದೆ.
ಗೋಧ್ರೋತ್ತರ ಗಲಭೆಯಲ್ಲಿ ಇಂದಿನ ಪ್ರಧಾನಿ ಹಾಗೂ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರ ಕೆಲವರ ಪಾತ್ರವಿದೆ, ಅವರು ಪಿತೂರಿ ನಡೆಸಿದ್ದಾರೆ ಎಂದು ಹತ್ಯೆಗೀಡಾದ ಮಾಜಿ ಕಾಂಗ್ರೆಸ್ ಸಂಸದ ಇಹ್ಸಾನ್ ಜಫ್ರಿ ಅವರ ಪತ್ನಿ ಜಕಿಯಾ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ ಅಪರಾಧ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದರು.
ಗಲಭೆಗೆ ಮೋದಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 59 ಮಂದಿ ಭಾಗಿಯಾಗಿ ಪಿತೂರಿ ನಡೆಸಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಅಲ್ಲದೆ ಈ ಆರೋಪಕ್ಕೆ ಸಂಬಂಧಪಟ್ಟಂತೆ ಹೊಸ ತನಿಖೆಯನ್ನು ನಡೆಸಬೇಕೆಂದು ಕೂಡ ಮನವಿ ಮಾಡಿದ್ದರು.
2002ರ ಫೆಬ್ರವರಿ 27ರಂದು ಗೋಧ್ರಾ ರೈಲಿನಲ್ಲಿ ಕರಸೇವಕರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣದ ಮರುದಿನ ಗುಲ್ಬರ್ಗ ಸೊಸೈಟಿ ಮೇಲೆ ನಡೆದ ಸಾಮೂಹಿಕ ದಾಳಿಯಲ್ಲಿ 68 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಕಾಂಗ್ರೆಸ್ ನಾಯಕ ಇಹ್ಸಾನ್ ಜಫ್ರಿ ಕೂಡ ಸೇರಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತನಿಖಾ ತಂಡ 2012 ಫೆಬ್ರವರಿ 8ರಂದು ಮೋದಿ ಹಾಗೂ ಇತರರಿಗೆ ಕ್ಲೀನ್ ಚಿಟ್ ನೀಡಿ ಕೇಸಿನ ಮುಕ್ತಾಯ ವರದಿಯನ್ನು ನೀಡಿತ್ತು.
2013ರ ಡಿಸೆಂಬರ್ ನಲ್ಲಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಫ್ರಿ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಜಕಿಯಾ ಜೆಫ್ರಿ 2014ರಲ್ಲಿ ಹೈಕೋರ್ಟ್ ಗೆ ಮೊರೆ ಹೋಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics