ಕಣ್ಣೂರು: ಬಿಜೆಪಿ ಕಾರ್ಯಕರ್ತರ ಮೇಲಿನ ಹಿಂಸಾಚಾರ ಖಂಡಿಸಿ ಕೇರಳದಲ್ಲಿ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ದಿಢೀರ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ದೆಹಲಿಗೆ ಮರಳಿದ್ದಾರೆ.
ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸ್ವಗ್ರಾಮದತ್ತ ಜನರಕ್ಷಾ ಯಾತ್ರೆ ಸಾಗುತ್ತಿದ್ದು, ಅಮಿತ್ ಶಾ ಗೈರು ಆಗಿದ್ದಾರೆ.
ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ತುರ್ತು ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅವರು ದಿಢೀರ್ ದೆಹಲಿಗೆ ತೆರಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ವರದಿಗಾರರಿಗೆ ತಿಳಿಸಿದ್ದಾರೆ. ಆದರೆ ಜನರಕ್ಷಾ ಯಾತ್ರೆಗೆ ಜನ ಬೆಂಬಲ ಇಲ್ಲದ ಹಿನ್ನೆಲೆಯಲ್ಲಿ ಶಾ ಅವರು ಪ್ರವಾಸ ಮೊಟಕುಗೊಳಿಸಿದ್ದಾರೆಂಬ ಊಹಾಪೋಹವನ್ನು ಬಿಜೆಪಿ ಮುಖಂಡರು ತಳ್ಳಿಹಾಕಿದ್ದಾರೆ.
ಅಕ್ಟೋಬರ್ 3ರಂದು ಕಣ್ಣೂರಿನ ಪಯ್ಯನ್ನೂರಿನಲ್ಲಿ 15 ದಿನಗಳ ಜನರಕ್ಷಾ ಯಾತ್ರೆಗೆ ಅಮಿತ್ ಶಾ ಚಾಲನೆ ನೀಡಿದ್ದರು. ನಿನ್ನೆ ಯಾತ್ರೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದರು. ಯಾತ್ರೆ ಅಕ್ಟೋಬರ್ 17ರಂದು ತಿರುವನಂತಪುರಂನಲ್ಲಿ ಅಂತ್ಯಗೊಳ್ಳಲಿದ್ದು, ಯಾತ್ರೆಯ ಕೊನೆಯ ಸಮಾವೇಶದಲ್ಲಿ ಮಾತ್ರ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ