ನವದೆಹಲಿ: ವಿವಾದಿತ ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ಅಲಿಯಾಸ್ ಸುಖ್ವಿಂದರ್ ಖೌರ್ ಗೆ ತನ್ನ ಕುರ್ಚಿ ಬಿಟ್ಟುಕೊಟ್ಟು ವಿವಿಐಪಿ ಆತಿಥ್ಯ ನೀಡಿದ ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣಾ ಅಧಿಕಾರಿ ಸಂಜಯ್ ಶರ್ಮಾ ಹಾಗೂ ಮತ್ತೊಬ್ಬ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸೆಪ್ಟೆಂಬರ್ 28ರಂದು ರಾಧೆ ಮಾ ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಠಾಣಾಧಿಕಾರಿ (ಎಸ್‌ಎಚ್‌ಒ) ಸಂಜಯ್ ಶರ್ಮಾ ಅವರು ತಾವು ಕುಳಿತಿರುವ ಆಸನದಲ್ಲೇ ರಾಧೆಮಾ ಅವರನ್ನು ಕೂರುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ವಿವಾದಿತ ದೇವ ಮಹಿಳೆಗೆ ಕೆಂಪುಬಣ್ಣದ ಶಾಲು ಹೊದಿಸಿ ಬಳಿಕ ಕೈ ಮುಗಿದು ನಮಸ್ಕರಿಸಿದ್ದಾರೆ. ಅಲ್ಲದೆ ಅವರ ಪಕ್ಕದಲ್ಲೇ ಕೈ ಜೋಡಿಸಿ ನಿಂತು ಕೊಂಡು ಗೌರವ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸಂಜಯ್ ಶರ್ಮಾ ಅವರ ಈ ಕಾರ್ಯ ವ್ಯಾಪಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು, ಠಾಣಾಧಿಕಾರಿ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಿದ್ದಲ್ಲದೆ ಐವರು ಪೊಲೀಸರನ್ನು ರಜೆಯ ಮೇಲೆ ಕಳುಹಿಸಿದ್ದಾರೆ. ಅಲ್ಲದೆ ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಿರುವುದಾಗಿ ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಅವರು ತಿಳಿಸಿದ್ದಾರೆ.
ವಿವಾದಿತ ದೇವ ಮಹಿಳೆ ರಾಧೆ ಮಾ ವಿರುದ್ಧ ಹಲವು ಆರೋಪಗಳಿದ್ದು, ವರದಕ್ಷಿಣೆ ಕಿರುಕುಳ, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ, ಧಾರ್ಮಿಕ ಅನುಯಾಯಿಗಳನ್ನು ತಪ್ಪುದಾರಿಗೆಳೆಯುತ್ತಿರುವ ಆರೋಪಗಳು ಸೇರಿದಂತೆ ಅವರ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಮುಂಬೈ ನ್ಯಾಯಾಲಯದಲ್ಲಿ ರಾಧೆ ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ.