ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ರಾಧೆಮಾ
ನವದೆಹಲಿ: ವಿವಾದಿತ ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ಅಲಿಯಾಸ್ ಸುಖ್ವಿಂದರ್ ಖೌರ್ ಮತ್ತೆ ಸುದ್ದೆಗೆ ಗ್ರಾಸವಾಗಿದ್ದು, ಈ ಬಾರಿ ಪೊಲೀಸ್ ಠಾಣಾಧಿಕಾರಿಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ರಾಧೆ ಮಾ ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಠಾಣಾಧಿಕಾರಿ (ಎಸ್‌ಎಚ್‌ಒ) ಸಂಜಯ್ ಶರ್ಮಾ ಅವರು ತಾವು ಕುಳಿತಿರುವ ಆಸನದಲ್ಲೇ ರಾಧೆಮಾ ಅವರನ್ನು ಕೂರುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ವಿವಾದಿತ ದೇವ ಮಹಿಳೆಗೆ ಕೆಂಪುಬಣ್ಣದ ಶಾಲು ಹೊದಿಸಿ ಬಳಿಕ ಕೈ ಮುಗಿದು ನಮಸ್ಕರಿಸಿದ್ದಾರೆ. ಅಲ್ಲದೆ ಅವರ ಪಕ್ಕದಲ್ಲೇ ಕೈ ಜೋಡಿಸಿ ನಿಂತು ಕೊಂಡು ಗೌರವ ನೀಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಜಯ್ ಶರ್ಮಾ ಅವರ ಈ ಕಾರ್ಯ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಪರ-ವಿರೋಧಗಳನ್ನು ಎದುರಿಸುವಂತಾಗಿದೆ.
ಇನ್ನು ವಿವಾದಿತ ದೇವ ಮಹಿಳೆ ರಾಧೆ ಮಾ ವಿರುದ್ಧ ಹಲವು ಆರೋಪಗಳಿದ್ದು, ವರದಕ್ಷಿಣೆ ಕಿರುಕುಳ, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ, ಧಾರ್ಮಿಕ ಅನುಯಾಯಿಗಳನ್ನು ತಪ್ಪುದಾರಿಗೆಳೆಯುತ್ತಿರುವ ಆರೋಪಗಳು ಸೇರಿದಂತೆ ಅವರ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಮುಂಬೈ ನ್ಯಾಯಾಲಯದಲ್ಲಿ ರಾಧೆ ಮಾ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ.