ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನ ಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು 2018ರ ಸೆಪ್ಟೆಂಬರ್ ವೇಳೆಗೆ ವ್ಯವಸ್ಥಿತವಾಗಿ ಸಜ್ಜಾಗಲಿದ್ದೇವೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗ ನಿನ್ನೆ ಎಲೆಕ್ಟೊರಲ್ ರಿಜಿಸ್ಟ್ರೇಷನ್ ಆಫೀಸರ್ ನೆಟ್ ವರ್ಕ್(ಚುನಾವಣಾ ನೋಂದಣಿ ಅಧಿಕಾರಿ ಜಾಲ) ಎಂಬ ವೆಬ್ ಆಧಾರಿತ ಅಪ್ಲಿಕೇಶನ್ ನ್ನು ಬಿಡುಗಡೆ ಮಾಡಿದ್ದು ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದೆ.
ಎಲೆಕ್ಟ್ರಾನಿಕ್ ಮತ ಯಂತ್ರಗಳ(ಇವಿಎಂ) ಬದಲಾಗಿ ಮತದಾನ ಕೇಂದ್ರಗಳಲ್ಲಿ ಇನ್ನು ಮುಂದೆ ವಿವಿಪ್ಯಾಟ್ ಗಳನ್ನು ಬಳಸಲಾಗುವುದು ಎಂದು ಚುನಾವಣಾ ಆಯೋಗ ಇತ್ತೀಚೆಗೆ ಘೋಷಣೆ ಮಾಡಿದ ಕೆಲ ದಿನಗಳಲ್ಲಿಯೇ ಈ ನಿರ್ಧಾರವನ್ನು ಕೈಗೊಂಡಿದೆ.
ಸಂಸತ್ತು ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಚುನಾವಣಾ ಆಯೋಗಕ್ಕೆ ಏನೇನು ಅಗತ್ಯವಿದೆ ಮತ್ತು ಈ ಕುರಿತು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗ, ಹೊಸ ಎಲೆಕ್ಟ್ರಾನಿಕ್ ಮತ ಯಂತ್ರಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಖರೀದಿಗೆ ಹಣವನ್ನು ಕೋರಿತ್ತು. ಅದರಂತೆ ವಿವಿಪ್ಯಾಟ್ ಗಳ ಖರೀದಿಗೆ 3,400 ಕೋಟಿ ರೂಪಾಯಿ ಮತ್ತು ಎಲೆಕ್ಟ್ರಾನಿಕ್ ಮತ ಯಂತ್ರಗಳ ಖರೀದಿಗೆ 12,000 ಕೋಟಿ ರೂಪಾಯಿ ಕೇಂದ್ರ ಸರ್ಕಾರದಿಂದ ಸಿಕ್ಕಿದೆ.
ಇದೀಗ ಆಯೋಗ ಏಕಕಾಲಕ್ಕೆ ಚುನಾವಣೆ ನಡೆಸಲು ಮುಂದಿನ ವರ್ಷ ಸೆಪ್ಟೆಂಬರ್ ಹೊತ್ತಿಗೆ ಸಂಪೂರ್ಣ ಸಿದ್ದವಾಗಲಿದೆ ಎಂದು ಚುನಾವಣಾ ಆಯುಕ್ತ ಒ.ಪಿ.ರಾವತ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ಬಂದ ಕೂಡಲೇ ಹೊಸ ಎಲೆಕ್ಟ್ರಾನಿಕ್ ಮತ ಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಖರೀದಿಗೆ ಆಯೋಗ ಈಗಾಗಲೇ ಆದೇಶ ನೀಡಿದೆ. ಸೆಪ್ಟೆಂಬರ್ 2018ರ ವೇಳೆಗೆ 40 ಲಕ್ಷ ವಿವಿಪ್ಯಾಟ್ ಯಂತ್ರಗಳು ಸಿಗಲಿದೆ ಎಂದು ಹೇಳಿದರು.
ವ್ಯಕ್ತಿ ಮತ ಹಾಕಿರುವ ಪಕ್ಷದ ಗುರುತಿನೊಂದಿಗೆ ಚೀಟಿಯೊಂದನ್ನು ವಿವಿಪ್ಯಾಟ್ ಯಂತ್ರಗಳು ತೋರಿಸುತ್ತದೆ. ವ್ಯಕ್ತಿ ಮತ ಹಾಕಿದ ನಂತರ ಚೀಟಿ ಬಾಕ್ಸ್ ಗೆ ಹೋಗಿ ಬೀಳುತ್ತದೆ. ಅದನ್ನು ಮತದಾರ ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ. ವಿವಿಪ್ಯಾಟ್ ಯಂತ್ರಗಳನ್ನು ಈಗಾಗಲೇ ಕೆಲವು ಕಡೆಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ ಎಂದು ವಿವರಿಸಿದರು.
ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಕೆಲವು ರಾಜಕೀಯ ಪಕ್ಷಗಳು ಆರೋಪಿಸಿದ್ದು ವಿವಿಪ್ಯಾಟ್ ಗಳ ಬಳಕೆಗೆ ಒತ್ತಾಯಿಸುತ್ತಿವೆ. ಇತ್ತೀಚೆಗೆ 16 ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಮತದಾನದ ವೇಳೆ ಪಾರದರ್ಶಕತೆ ತರಲು ವಿವಿಪ್ಯಾಟ್ ಗಳನ್ನು ಬಳಸಬೇಕೆಂದು ಒತ್ತಾಯಿಸಿದ್ದರು. ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತಿರುಚಲಾಗಿದೆ ಎಂದು ಈ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಂತರ ಬಹುಜನ ಸಮಾಜ ಪಕ್ಷ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಆರೋಪಿಸಿದ್ದವು.
ಎಲೆಕ್ಟೊರಲ್ ರಿಜಿಸ್ಟ್ರೇಷನ್ ಆಫೀಸರ್ ನೆಟ್ ವರ್ಕ್, ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಭಾಗಿಯಾಗಿರುತ್ತಾರೆ. ಮತದಾರರು ಆನ್ ಲೈನ್ ದಾಖಲಾತಿ ಮಾಡಿಕೊಳ್ಳಲು ಈ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು ಎಂದು ರಾವತ್ ತಿಳಿಸಿದರು.
ನಾವು ಮುಂದಿನ ವರ್ಷ ಸೆಪ್ಟೆಂಬರ್ ಹೊತ್ತಿಗೆ ಚುನಾವಣೆ ನಡೆಸಲು ಸಿದ್ಧರಾಗಿದ್ದೇವೆ. ಆದರೆ ಇದಕ್ಕೆ ಬೇಕಾದ ಕಾನೂನು ತಿದ್ದುಪಡಿ ಮತ್ತು ನಿರ್ಧಾರ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಆಯೋಗ ಹೇಳಿದೆ.
ಚುನಾವಣಾ ನೋಂದಣಿ ಅಧಿಕಾರಿ ಜಾಲ ಸ್ವಯಂಚಾಲಿತವಾಗಿ ನಕಲಿ ದಾಖಲಾತಿ ಮತದಾರರನ್ನು ಪತ್ತೆ ಹಚ್ಚುತ್ತದೆ. ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಅಧಿಕಾರಿಗಳು ಒಂದೇ ಜಾಲದಲ್ಲಿರುವುದರಿಂದ ಒಬ್ಬರಿಗೊಬ್ಬರು ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ರಾವತ್ ವಿವರಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಚುನಾವಣಾ ಆಯೋಗ ಇತ್ತೀಚೆಗೆ ಮತದಾನದ ಸಂದರ್ಭದಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಿತ್ತು.