ದೇಶ

ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ಮತ್ತು ಮುಕ್ತ ವ್ಯಾಪಾರಕ್ಕೆ ಭಾರತ-ಇಯು ಶೃಂಗಸಭೆ ಒಪ್ಪಿಗೆ

Sumana Upadhyaya
ದೆಹಲಿ: ಭಯೋತ್ಪಾದನೆ ವಿರುದ್ಧ ಹೋರಾಡಲು ಪರಸ್ಪರ ಸಹಕಾರಕ್ಕೆ ಭಾರತ ಮತ್ತು ಐರೋಪ್ಯ ಒಕ್ಕೂಟಗಳು 14ನೇ ಭಾರತ-ಐರೋಪ್ಯ ಒಕ್ಕೂಟ ದೇಶಗಳ ಶೃಂಗಸಭೆಯಲ್ಲಿ ಒಪ್ಪಿಕೊಂಡಿವೆ. 
ದೆಹಲಿಯಲ್ಲಿ ಇಂದು ನಡೆದ 14ನೇ ಭಾರತ-ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲಿ ನಿಯೋಗ ಮಟ್ಟದ ಮಾತುಕತೆ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲು ಮತ್ತು ಈ ನಿಟ್ಟಿನಲ್ಲಿ ಹೆಚ್ಚಿನ ಸಹಕಾರಕ್ಕೆ ಒತ್ತು ನೀಡಲು ಪರಸ್ಪರ ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು.
ಐರೋಪ್ಯ ಮಂಡಳಿ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಜೀನ್ ಕ್ಲೌಡೆ ಜಂಕರ್ ಜೊತೆಗೆ ನಿಯೋಗ ಮಟ್ಟದ ಮಾತುಕತೆಯನ್ನು ಪ್ರಧಾನಿ ನಡೆಸಿದರು.
ಜಾಗತಿಕ ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕೆ ಮತ್ತು ಹವಾಮಾನ ಬದಲಾವಣೆ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮ ಬಹು ಆಯಾಮದ ಸಂಬಂಧಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯು ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿವೆ. ಕಳೆದ ವರ್ಷ ಬ್ರುಸೆಲ್ಸ್ ನಲ್ಲಿ 13ನೇ ಭಾರತ-ಐರೋಪ್ಯ ಒಕ್ಕೂಟದ ಶೃಂಗಸಭೆಯ ನಂತರ ಎರಡೂ ಕಡೆಯ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಿವೆ ಎಂದರು.
ಐರೋಪ್ಯ ಒಕ್ಕೂಟ ದೇಶಗಳು ಭಾರತದ ಬಹುದೊಡ್ಡ ವ್ಯಾಪಾರ ಪಾಲುದಾರಿಕೆ ದೇಶಗಳಾಗಿವೆ. ಸೌರ ವಿದ್ಯುತ್ ಯೋಜನೆಗಳನ್ನು ಜಾರಿಗೆ ತರಲು ಭಾರತ ಪ್ರಾಯೋಜಿತ ಅಂತಾರಾಷ್ಟ್ರೀಯ ಸೌರ ಮೈತ್ರಿಗೆ ಸದಸ್ಯ ರಾಷ್ಟ್ರಗಳಿಗೆ ಐರೋಪ್ಯ ಹೂಡಿಕೆ ಬ್ಯಾಂಕುಗಳು ಸಹಕಾರಿಯಾಗಲಿವೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.
ಭಾರತ ಮತ್ತು ಐರೋಪ್ಯ ಒಕ್ಕೂಟ ದೇಶಗಳು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು ಸಂಬಂಧದ ರಾಜಕೀಯ ಆಯಕಟ್ಟನ್ನು ಅಭಿವೃದ್ಧಿಪಡಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಐರೋಪ್ಯ ಮಂಡಳಿ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಹೇಳಿದರು.
SCROLL FOR NEXT