ಹೈದರಾಬಾದ್: 75 ವರ್ಷದ ವೃದ್ಧರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇಲ್ಲಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಸಿಕ್ಕಿದ್ದು, ತಮ್ಮ ಮನೆಯಲ್ಲಿ ಹಲ್ಲಿಯ ಮೇಲೆ ಕಾಲಿಟ್ಟು ಬಿದ್ದು ಏಟಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಎರಡು ದಿನಗಳ ಹಿಂದೆ ಅಮೆರಿಕಾದಿಂದ ಪತ್ನಿ ಮತ್ತು ಇಬ್ಬರು ಪುತ್ರಿಯರು ಮನೆಗೆ ಬಂದಾಗಲೇ ಲಕ್ಷ್ಮೀ ನಾರಾಯಣ ಮೂರ್ತಿಯವರು ಮೃತಪಟ್ಟಿರುವುದು ಗೊತ್ತಾಗಿರುವುದು. ಹೈದರಾಬಾದಿನ ರಾಕ್ ಟೌನ್ ಪ್ರದೇಶದ ಸಾಯಿ ಮೂರ್ತಿ ನಿವಾಸದಲ್ಲಿ ಈ ಘಟನೆ ನಡೆದಿದೆ.
ಅಪಾರ್ಟ್ ಮೆಂಟ್ ನ ಮೇಲ್ಮಹಡಿಯಲ್ಲಿ ಲಕ್ಷ್ಮೀ ನಾರಾಯಣ ಮೂರ್ತಿಯವರು ಒಬ್ಬರೇ ವಾಸಿಸುತ್ತಿದ್ದರು. ಆಗಸ್ಟ್ 18ರಂದು ಬಚ್ಚಲು ಮನೆಗೆ ಸ್ನಾನ ಮಾಡಲು ಹೋಗಿದ್ದವರು ಸ್ನಾನ ಮುಗಿಸಿಕೊಂಡು ಹೊರಬಂದಾಗ ಹಲ್ಲಿಯ ಮೇಲೆ ಆಕಸ್ಮಿಕವಾಗಿ ಕಾಲಿಟ್ಟು ಬಿದ್ದಿದ್ದಾರೆ. ಆಗ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಗಲೇ ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳುತ್ತಾರೆ. ಮನೆಯ ಕಿಟಕಿ, ಬಾಗಿಲುಗಳೆಲ್ಲಾ ಮುಚ್ಚಿದ್ದರಿಂದ ಅಕ್ಕಪಕ್ಕದ ಮನೆಯವರಿಗೆ ವಾಸನೆ ಬಡಿದಿರಲಿಲ್ಲ.
ಲಕ್ಷ್ಮೀ ನಾರಾಯಣ ಅವರ ಕಾಲಿನ ಹತ್ತಿರ ಸತ್ತ ಹಲ್ಲಿಯೊಂದು ಬಿದ್ದಿತ್ತು. ಹಲ್ಲಿಯ ಮೇಲೆ ಕಾಲಿಟ್ಟು ಜಾರಿ ಬಿದ್ದಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ಅಮೆರಿಕಾದಿಂದ ಪತ್ನಿ ಮತ್ತು ಮಕ್ಕಳು ಫೋನ್ ಕರೆ ಮಾಡಿದರೆ ಎತ್ತುತ್ತಿರಲಿಲ್ಲ. ಒಂದು ತಿಂಗಳಾದರೂ ಫೋನ್ ತೆಗೆಯದ ಕಾರಣ ಸಂಶಯವುಂಟಾಗಿ ಹೈದರಾಬಾದಿಗೆ ಬಂದಿದ್ದರು.
ಫ್ಲ್ಯಾಟ್ ಲಕ್ಷ್ಮೀನಾರಾಯಣ ಅವರ ಮಗಳ ಹೆಸರಲ್ಲಿದ್ದು ಬಾಗಿಲಿಗೆ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆಯಿತ್ತು. ಪತ್ನಿ ಮತ್ತು ಪುತ್ರಿಯರು ಬಾಗಿಲು ಒಡೆದು ಒಳಗೆ ಹೋದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು.
ಸರ್ಕಾರಿ ನಿವೃತ್ತ ಉದ್ಯೋಗಿಯಾಗಿರುವ ಲಕ್ಷ್ಮೀ ನಾರಾಯಣ ಮೂರ್ತಿಯವರನ್ನು ಅಕ್ಕಪಕ್ಕದವರಿಗೆ ಅಷ್ಟಾಗಿ ಪರಿಚಯವಿರಲಿಲ್ಲ. ಹೊರಗಿನಿಂದ ಬೀಗ ಹಾಕಿ ಮನೆಯವರು ಅಮೆರಿಕಾಕ್ಕೆ ಹೋಗಿರಬೇಕು ಎಂದು ನಿವಾಸಿಗಳು ಭಾವಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos