ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲುಪಾಲಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ಶುಕ್ರವಾರ ಪೆರೋಲ್ ಮಂಜೂರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಶಶಿಕಲಾ ಅವರ ಪತಿ ಎಂ ನಟರಾಜನ್ ಅವರು ಅನಾರೋಗ್ಯಕ್ಕೀಡಾಗಿದ್ದು, ಚೆನ್ನೈನ ಗ್ಲೆನಿಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಅಂಗ ಕಸಿ ಶಸ್ತ್ರ ಚಿಕಿತ್ಸೆಯಾಗಿತ್ತು. ಇದೇ ಕಾರಣಕ್ಕೆ ಶಶಿಕಲಾ ಈ ಹಿಂದೆ ಪೆರೋಲ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಅವರ ಅರ್ಜಿಯನ್ನು ಅಧಿಕಾರಿಗಳು ಪುರಸ್ಕರಿಸುವ ಸಾಧ್ಯತೆ ಇದ್ದು, ಇಂದು ಪೆರೋಲ್ ಮೇಲೆ ಶಶಿಕಲಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಶಶಿಕಲಾ ಆಪ್ತ ಮತ್ತು ಸಂಬಂಧಿ ಟಿಟಿವಿ ದಿನಕರನ್ ಮಾಹಿತಿ ನೀಡಿದ್ದು, ಪತಿಯ ಆರೋಗ್ಯವನ್ನು ವಿಚಾರಿಸಿಕೊಳ್ಳಲು ಶಶಿಕಲಾ ಅವರು ಪೆರೋಲ್ ಮೇಲೆ ಹೊರ ಬರುತ್ತಿರುವುದಾಗಿ ಹೇಳಿದ್ದಾರೆ. 'ಶಶಿಕಲಾ ಅವರು ನಾಳೆ ಪೆರೋಲ್ ಮೇಲೆ ಹೊರಬರುವ ಸಂಭವವಿದ್ದು, ಶಶಿಕಲಾ ಪರ ವಕೀಲರು 15 ದಿನದ ಪೆರೋಲ್ ನೀಡುವಂತೆ ಕೇಳಿದ್ದಾರೆ, ಆದರೆ ಎಷ್ಟು ದಿನ ಸಿಗುತ್ತದೋ ಎಂಬುದು ಇನ್ನೂ ಖಚಿತವಾಗಿಲ್ಲ' ಎಂದು ಟಿಟಿವಿ ದಿನಕರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದಹಾಗೆ ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.