ಕಾಶ್ಮೀರಕ್ಕೆ ಪ್ಲಾಸ್ಟಿಕ್ ಬುಲೆಟ್ ಗಳನ್ನು ರವಾನಿಸಿದ ಸಿಆರ್ ಪಿಎಫ್; ಪೆಲೆಟ್ ಬಳಕೆ ತಗ್ಗಿಸಲು ಕ್ರಮ
ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆಯನ್ನು ಹತೋಟಿಗೆ ತರಲು ಪೊಲೀಸರು ಬಳಸುತ್ತಿರುವ ಪೆಲೆಟ್ ಗನ್ ಗೆ ತೀವ್ರ ವಿರೋಧ ವ್ಯಕ್ತವಾದ....
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆಯನ್ನು ಹತೋಟಿಗೆ ತರಲು ಪೊಲೀಸರು ಬಳಸುತ್ತಿರುವ ಪೆಲೆಟ್ ಗನ್ ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಪೆಲೆಟ್ ಬದಲು ಹೊಸದಾಗಿ ಅಭಿವೃದ್ಧಿಪಡಿಸಿದ 21 ಸಾವಿರ ಸುತ್ತಿನ ಪ್ಲಾಸ್ಟಿಕ್ ಬುಲೆಟ್ ಗಳನ್ನು ರವಾನಿಸಿದೆ ಎಂದು ಶನಿವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಈ ಪ್ಲಾಸ್ಟಿಕ್ ಬುಲೆಟ್ ಗಳನ್ನು ಅಭಿವೃದ್ಧಿಪಡಿಸಿದ್ದು, ಎಕೆ ಸರಣಿಯ ರೈಫಲ್ ಗಳಿಗೆ ಇವುಗಳನ್ನು ಬಳಸಬಹುದಾಗಿದೆ.
ಈ ಪ್ಲಾಸ್ಟಿಕ್ ಬುಲೆಟ್ ಗಳು ಪೆಲೆಟ್ ಗನ್ ಗಿಂತ ಕಡಿಮೆ ಮಾರಕವಾಗಿರುವುದು ಪರೀಕ್ಷೆಯಿಂದ ಸಾಭೀತಾಗಿದೆ. ಈ ಬುಲೆಟ್ ಗಳನ್ನು ಬಳಸಿ ಪ್ರತಿಭಟನಾಕರರನ್ನು ಚದುರಿಸಬಹುದು ಸಿಆರ್ ಪಿಎಫ್ ಮಹಾ ನಿರ್ದೇಶಕ ಆರ್ ಆರ್ ಭಟ್ನಾಗರ್ ಅವರು ಪಿಟಿಐಗೆ ತಿಳಿಸಿದ್ದಾರೆ.