ಮುಂಬೈ: ಕೃಷಿ ಜಮೀನಿನ ಬೆಳೆಗಾಗಿ ಸಿಂಪಡಿಸಿದ್ದ ಕೀಟನಾಶಕ ಗಾಳಿಯಲ್ಲಿ ಹರಡಿದ ಪರಿಣಾಮ ಸಮೀಪದಲ್ಲಿದ್ದ ಸುಮಾರು 20 ಮಂದಿ ರೈತರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯದ ಯವತ್ಮಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ತಿಂಗಳು ಈ ಘಟನೆ ನಡೆದಿದೆ. ಕಿಟನಾಶಕಗಳ ಸಿಂಪಡಣೆಯ ವೇಳೆ ವಿಷಕಾರಿ ಗಾಳಿಯನ್ನು ಉಸಿರಾಡಿದ್ದರಿಂದ ಈವರೆಗೂ 600 ರೈತರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ 25 ಮಂದಿ ದೃಷ್ಟಿ ಕಳೆದುಕೊಂಡಿದ್ದು, 20 ಮಂದಿ ರೈತರು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ.
ಘಟನೆಯಲ್ಲಿ ಹಲವು ರೈತರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ರೈತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ರೈತರ ಸಾವಿನ ವಿಚಾರ ಇದೀಗ ಮಹಾರಾಷ್ಟ್ರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅಪಾಯಕಾರಿ ಔಷಿಧಿ ಸಿಂಪಡನೆ ಹಾಗೂ ಕೃಷಿ ಭೂಮಿಗಳಲ್ಲಿ ಕೆಲಸ ಮಾಡುವ ರೈತರ ದಯನೀಯ ಸ್ಥಿತಿ ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ರೈತ ಮುಖಂಡ ದೇವಾನಂದ್ ಪವಾರ್ ಅವರ, “ಸರ್ಕಾರದಿಂದ ರೈತರಿಗೆ ಯಾವ ಸಹಾಯವೂ ಸಿಗುತ್ತಿಲ್ಲ. ಬದಲಾಗಿ ಅವರು ತಮ್ಮ ಜೀವವನ್ನು ಈ ರೀತಿ ಕಳೆದುಕೊಳ್ಳುತ್ತಿದ್ದಾರೆ. ನಾವು ಈ ಪ್ರಕರಣವನ್ನು ಕೋರ್ಟ್ ಗೆ ಒಯ್ಯುತ್ತೇವೆ" ಎಂದು ಹೇಳಿದ್ದಾರೆ.
ಇನ್ನು ಪ್ರಕರಣ ಸಂಬಂದ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸರ್ಕಾರದ ಅಧೀನದ ಕೃಷಿ ಸಂಬಂಧಿತ ಸಂಸ್ಥೆ ವಿಎನ್ ಎಸ್ ಎಸ್ ಎಂ ನ ಮುಖ್ಯಸ್ಥ ಕಿಶೋರ್ ತಿವಾರಿ ಅವರು, "ರೈತರು ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸುತ್ತಿಲ್ಲ. ಕೀಟನಾಶಕಗಳನ್ನು ಸಿಂಪಡಿಸುವ ವೇಳೆ ಅವರು ಮುಖವನ್ನು ಮುಚ್ಚಿಕೊಳ್ಳಬೇಕು" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos