ದೇಶ

ವಾಯುಸೇನೆ ಸೇರಿದ ಮಹಿಳಾ ಪೈಲಟ್ ಗಳಿಂದ ದೈತ್ಯ ಮಿಗ್ 21 ಯುದ್ಧ ವಿಮಾನ ಚಾಲನೆ!

Srinivasamurthy VN
ನವದೆಹಲಿ: ಭಾರತೀಯ  ವಾಯುಸೇನೆಗೆ ಸೇರ್ಪಡೆಯಾಗಿರುವ ಮೂವರು ಮಹಿಳಾ ಪೈಲಟ್ ಗಳು ದೈತ್ಯ ಮಿಗ್ 21 ಯುದ್ಧ ವಿಮಾನವನ್ನು ಚಾಲನೆ ಮಾಡಲಿದ್ದಾರೆ ಎಂದು ವಾಯುಪಡೆ ಮುಖ್ಯಸ್ಥ ಬಿಎಸ್ ಧನೊವಾ ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಭಾರತೀಯ ವಾಯುಸೇನೆ ದಿನಾಚರಣೆ ವೇಳೆ ಮಹಿಳಾ ಪೈಲಟ್ ಗಳನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ ಧನೋವಾ ಅವರು, ವಾಯುಸೇನೆಗೆ ಸೇರ್ಪಡೆಯಾಗಿರುವ ಮೊದಲ ಮಹಿಳಾ ಪೈಲಟ್ ಗಳಾದ ಭಾವನಾ ಕಾಂತ್, ಅವನಿ ಚತುರ್ವೇದಿ ಮತ್ತು ಮೋಹನ ಸಿಂಗ್ ಅವರು ದೈತ್ಯ ಮಿಗ್ 21 ಯುದ್ಧ ವಿಮಾನವನ್ನು ಚಾಲನೆ ಮಾಡಲಿದ್ದಾರೆ. ಯುದ್ಧ ವಿಮಾನ ಚಾಲನೆ ಸಂಬಂಧ ಈ ಮೂವರು ಪೈಲಟ್ ಗಳಿಗೆ ಇನ್ನೂ ಮೂರು  ತಿಂಗಳ ಕಾಲ ಉನ್ನತ ಮಟ್ಟದ ತರಬೇತಿ ನಡೆಯಲಿದ್ದು, ಮಿಗ್ 21 ಮಾತ್ರವಲ್ಲದೇ ಸುಖೋಯ್ ಮತ್ತು ತೇಜಸ್ ನಂತಹ ಯುದ್ಧ ವಿಮಾನಗಳನ್ನು ಕೂಡ ಚಾಲನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಕಳೆದ ವರ್ಷವೇ ಮಹಿಳಾ ಪೈಲಟ್ ಗಳಾದ ಭಾವನಾ ಕಾಂತ್, ಅವನಿ ಚತುರ್ವೇದಿ ಮತ್ತು ಮೋಹನ ಸಿಂಗ್ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು. ಮೂರು ತಿಂಗಳ ಉನ್ನತ ಮಟ್ಟದ ತರಬೇತಿ ಬಳಿಕ ವರ್ಷಾಂತ್ಯದಲ್ಲಿ  ಅಂದರೆ ಡಿಸೆಂಬರ್ ತಿಂಗಳಲ್ಲಿ ಅವರು ಸೇವೆಗೆ ಅಧಿಕೃತವಾಗಿ ಸೇರುವ ಸಾಧ್ಯತೆ ಇದೆ.

ಭಾವನಾ ಕಾಂತ್ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವೈದ್ಯಕೀಯ ಎಲೆಕ್ಟ್ರಾನಿಕ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ್ದು, ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆ ಮೂಲಕ ಅವರು ಭಾರತೀಯ  ವಾಯುಪಡೆಗೆ ಸೇರ್ಪಡೆಯಾಗಿದ್ದರು. ಇನ್ನು ಅವನಿ ಚತುರ್ವೇದಿ ಮಧ್ಯ ಪ್ರದೇಶದ ಸಾತ್ನದವರಾಗಿದ್ದು, ಜೈಪುರದ ಬನಸ್ತಾಲಿ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪೂರೈಸಿದ್ದಾರೆ. ಅಂತೆಯೇ  ಮೋಹನ ಸಿಂಗ್ ರಾಜಸ್ತಾನದ ಜುಂಜುನು ಜಿಲ್ಲೆಯವರಾಗಿದ್ದು, ಅವರು ಅಮೃತಸರದ ಗ್ಲೋಬಲ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಂಡ್ ಎಮರ್ಜೆಂಗ್ ಟೆಕ್ನಾಲಜಿಸ್ ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ನಲ್ಲಿ  ಬಿ.ಟೆಕ್ ಪದವಿ ಗಳಿಸಿದ್ದಾರೆ.
SCROLL FOR NEXT