ಕೇಂದ್ರ ಸಚಿವ ಪಿಯೂಷ್ ಗೋಯಲ್ (ಸಂಗ್ರಹ ಚಿತ್ರ)
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪೆನಿಯ ಬಗ್ಗೆ 'ದಿ ವೈರ್' ಸುದ್ದಿತಾಣ ಪ್ರಕಟಿಸಿದ್ದ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಅಮಿತ್ ಶಾ ಅವರ ಹೆಸರಿಗೆ ಕಳಂಕ ಹಚ್ಚುವ ಪ್ರಯತ್ನವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಅಮಿತ್ ಬಾಯ್ ಶಾ ಅವರ ಕಂಪೆನಿಯ ಆದಾಯ ಒಂದು ವರ್ಷದಲ್ಲೇ ರು 50 ಸಾವಿರದಿಂದ ರು 80 ಕೋಟಿಗೆ ಏರಿಕೆಯಾಗಿದೆ ಎಂದು ಸುದ್ದಿ ಪ್ರಕಟವಾದ ಬೆನ್ನಲ್ಲೇ ಸುದ್ದಿ ಪ್ರಕಟಿಸಿದ ದಿ ವೈರ್ ಅಂತರ್ಜಾಲ ತಾಣದ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ದಿ ವೈರ್ ಸುದ್ದಿತಾಣ ಅಮಿತ್ ಶಾ ಮತ್ತು ಅವರ ಪುತ್ರ ಜಯ್ ಶಾ ವಿರುದ್ಧ ಆಧಾರ ರಹಿತ ಆರೋಪ ಮಾಡಿದೆ. ಈ ಹಿನ್ನಲೆಯಲ್ಲಿ ವೆಬ್‌ಸೈಟ್ ನ ಮಾಲೀಕರು, ಸಂಪಾದಕರು ಮತ್ತು ವರದಿ ಬರೆದವರ ವಿರುದ್ಧ ರು.100 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಜಯ್ ಶಾ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, "ದಿ ವೈರ್ ಸುದ್ದಿತಾಣವು ನಮ್ಮ ಮುಖಂಡ ಅಮಿತ್ ಶಾ ಹಾಗೂ ಅವರ ಪುತ್ರ ಜಯ್ ಶಾ ಅವರ ಮಾನ ಹಾನಿ ಉದ್ದೇಶದಿಂದಲೇ ಈ ವರದಿ ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ವರದಿ. ಈ ವರದಿಗೆ ಆಧಾರವಿಲ್ಲ. ದಿ ವೈರ್ ಸುದ್ದಿತಾಣದ ಮಾಲೀಕರು, ಸಂಪಾದಕರು ಮತ್ತು ವರದಿ ಬರೆದವರ ವಿರುದ್ಧ ಅಹ್ಮದಾಬಾದ್ ನ್ಯಾಯಾಲಯದಲ್ಲಿ ರು. 100 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಜಯ್ ಶಾ ನಿರ್ಧರಿಸಿದ್ದಾರೆ" ಎಂದು ಗೋಯಲ್ ಹೇಳಿದ್ದಾರೆ.
ಅಂತೆಯೇ "ಜಯ್ ಶಾ ವ್ಯವಹಾರ ಪಾರದರ್ಶಕವಾಗಿದ್ದು, ಅವರ ಕಂಪೆನಿ ಯಾವುದೇ ಅವ್ಯವಹಾರ ನಡೆಸಿಲ್ಲ. ಕಂಪೆನಿಯ ಲೆಕ್ಕಪತ್ರಗಳಲ್ಲಿ ಎಲ್ಲವೂ ಸ್ಪಷ್ಟವಿದೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics