ಚೆನ್ನೈ: ಬೆಳೆಯುತ್ತಿರುವ ದೇಶದ ಆರ್ಥಿಕತೆಯನ್ನು ತಡೆಯಲು ಸಾಧ್ಯವಾಗದೆ ಕೆಲ ಭಾರತ ವಿರೋಧಿ ಶಕ್ತಿಗಳು ದೇಶಕ್ಕೆ ಹಾನಿ ಮಾಡಲು ಮತ್ತು ಅದರ ಆಯಕಟ್ಟಿನ ಸ್ಥಿತಿಯನ್ನು ದುರ್ಬಲಗೊಳಿಸಲು ಬಯಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಇಂದು ತಮಿಳುನಾಡಿನ ಅರಕೋಣಂನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪಾಸಿಂಗ್ ಔಟ್ ಪರೇಡ್ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಯೋತ್ಪಾದನೆ ಭಾರತಕ್ಕೆ ಇಂದು ದೊಡ್ಡ ಸವಾಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಜಾಗತಿಕ ವೇದಿಕೆಗೆ ತೆಗೆದುಕೊಂಡು ಹೋಗಿ ಬಲವಾಗಿ ಖಂಡಿಸಿದ್ದಾರೆ ಎಂದರು.
ಭಾರತ ಆರ್ಥಿಕವಾಗಿ ಸದೃಢವಾಗುವ ದಿನ ದೂರವಿಲ್ಲ. ವಿಶ್ವದಲ್ಲಿ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ವಿಶ್ವದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಪ್ರಮುಖ 10 ದೇಶಗಳಲ್ಲಿ ಭಾರತ ಸಹ ಒಂದು ಎಂದು ನಾನು ಹೇಳಬಲ್ಲೆ ಎಂದಿದ್ದಾರೆ.