ದೇಶ ಕಾಯುವ ಯೋಧರಿಗೆ ವಿಮಾನ ನಿಲ್ದಾಣದಲ್ಲಿ ಚಪ್ಪಾಳೆ ಮೂಲಕ ಗೌರವ ಸಲ್ಲಿಸಿದ ಜಮ್ಮು ಜನತೆ!
ಜಮ್ಮು: ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ಯೋಧರು ಬರುತ್ತಿರುವುದನ್ನು ಕಂಡ ಸ್ಥಳದಲ್ಲಿದ್ದ ಪ್ರಯಾಣಿಕರು ಏಕಕಾಲದಲ್ಲಿ ಚಪ್ಪಾಳೆ ಹೊಡೆದು, ಎದ್ದು ನಿಂತು ಗೌರವ ಸಲ್ಲಿಸಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ದೇಶದ ಗಡಿ ಕಾಯುವ ಯೋಧರನ್ನು ಎಲ್ಲಿಯೇ ಕಂಡರೂ ಎದ್ದು ನಿಂತು ಗೌರವ ಸಲ್ಲಿಸಿ ಎಂದು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಇದರಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಯಾಣಿಕರು ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ಸಿಆರ್'ಪಿಎಫ್ ಯೋಧರು ಆಗಮಿಸುತ್ತಿದ್ದಂತೆಯೇ ಕೂಡಲೇ ಎದ್ದು ನಿಂತ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ದೇಶ ಕಾಯೋ ಯೋಧರಿಗೆ ಸಾರ್ವಜನಿಕರು ಗೌರವ ಸಲ್ಲಿಸಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಮಾನ ನಿಲ್ದಾಣದಲ್ಲಿ ಜನರ ಪ್ರತಿಕ್ರಿಯೆ, ಗೌರವಗಳನ್ನು ಕಂಡು ಇಡೀ ಸೇನೆ ಬಹಳ ಸಂತಸವನ್ನು ವ್ಯಕ್ತಪಡಿಸಿದೆ. ಜನರ ಈ ರೀತಿಯ ಪ್ರತಿಕ್ರಿಯೆಗಳು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೇನೆಯನ್ನು ಪ್ರೇರೇಪಿಸುತ್ತದೆ ಎದು ಸಿಆರ್'ಪಿಎಫ್ ಡಿಜಿ ರಾಜೀವ್ ರಾಯ್ ಭಟ್ನಗರ್ ಹೇಳಿದ್ದಾರೆ.
ದೇಶಕ್ಕಾಗಿ ಸೇನೆ ಸಲ್ಲಿಸುತ್ತಿರುವ ಸೇವೆ ಹಾಗೂ ತ್ಯಾಗ, ಬಲಿದಾನಗಳಿಂದಾಗಿ ಜನರು ಗೌರವ ಸಲ್ಲಿಸುತ್ತಿದ್ದಾರೆಂದು ತಿಳಿಸಿದ್ದಾರೆ.
166 ಬೆಟಾಲಿಯನ್ ಪಡೆದ ಕಮಾಂಡಿಂಗ್ ಅಧಿಕಾರಿ ಆಶೀಶ್ ಕುಮಾರ್ ಜಾ ಮಾತನಾಡಿ, ಯೋಧರಿಗೆ ಈ ರೀತಿಯ ಪ್ರೋತ್ಸಾಗಳು ಬೇಕಿದೆ. ಈ ರೀತಿಯ ಪ್ರತಿಕ್ರಿಯೆಗಳು ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.