ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಪ್ರಕರಣದ ಪ್ರಮುಖ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ತನ್ನ ಮದುವೆಯನ್ನು ಒಪ್ಪಿಕೊಂಡಿದ್ದಾಳೆ..ಹೀಗಾಗಿ ಅಕೆ ತನ್ನ ಆಯ್ಕೆಯಂತೆ ನಡೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇರಳ ಲವ್ ಜಿಹಾದ್ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕಾನೂನುಬದ್ಧವಾಗಿ ಹಾದಿಯಾಳನ್ನು ವಿಚಾರಣೆಗೆ ಹಾಜರುಪಡಿಸಬೇಕಾಗುತ್ತದೆ ಎಂದು ಹೇಳಿದೆ. ಅಂತೆಯೇ ತಂದೆಯೊಬ್ಬ ತನ್ನ ಮಗಳು ಅಂಗವೈಕಲ್ಯತೆ ಅಥವಾ ಮಾನಸಿಕ ಅಸ್ವಸ್ಥೆತೆಯಿಂದ ಬಳಲುತ್ತಿದ್ದರೆ ಮಾತ್ರ ಮಗಳನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳಬಹುದೇ ಹೊರತು, ಇದಾವ ಸಮಸ್ಯೆಯೂ ಇಲ್ಲದಿದ್ದರೆ ಮಗಳನ್ನು ದಿಗ್ಬಂಧನದಲ್ಲಿಟ್ಟುಕೊಳ್ಳಲು ಅನುಮತಿಯಿಲ್ಲ. ಹೀಗಾಗಿ ಹಾದಿಯಾ ತನ್ನ ಇಚ್ಥೆಯಂಚೆ ಎಲ್ಲಿಗೆ ಬೇಕಾದರೂ ಹೋಗಬಹುದು. ಅವಳ ಜೀವನ ಆವಳ ಆಯ್ಕೆ ಮಾತ್ರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಇಬ್ಬರು ವಯಸ್ಕ ವ್ಯಕ್ತಿಗಳು ಪರಸ್ಪರ ಮದುವೆಯಾದರೆ, ಇಬ್ಬರಲ್ಲಿಯೂ ಯಾವುದೇ ದೂರಿಲ್ಲದಿರುವಾಗ ಯಾವ ಕೋರ್ಟಿಗೂ ಮಧ್ಯಪ್ರವೇಶಿಸುವ ಅಥವಾ ಮದುವೆಯನ್ನು ರದ್ದುಪಡಿಸು ಅಧಿಕಾರವಿಲ್ಲ. ಹಾದಿಯಾ ಬಯಸುವಲ್ಲಿಗೆ ಹೋಗಲು ಬಿಡಬೇಕೆಂದು ತಾನು ಭಾವಿಸುತ್ತೇನೆ" ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.
ಇದೇ ವೇಳೆ "ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಹಾದಿಯಾಳ ಹೇಳಿಕೆಯನ್ನು ಆಲಿಸುವ ಜವಾಬ್ದಾರಿಕೆಯಿಂದ ಸುಪ್ರೀಂಕೋರ್ಟು ಹಿಂದೆ ಸರಿಯುವುದಿಲ್ಲ. ಹಾದಿಯಾ ಖುದ್ಧು ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಬೇಕು. ಅಂತೆಯೇ ಸ್ವಇಚ್ಛೆಯಿಂದ ಆಕೆ ಅರ್ಜಿದಾರನನ್ನು ಮದುವೆಯಾಗಿದ್ದು, ಪತಿಯ ವಿರುದ್ಧ ಹಾದಿಯಾ ಯಾವುದೇ ದೂರು ಅಥವಾ ರಿಟ್ ಅರ್ಜಿ ದಾಖಲಿಸಿಲ್ಲ. ಹೀಗಿರುವಾಗ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯ ಪ್ರವೇಶ ಅನಗತ್ಯ..ಈ ಪ್ರಕರಣವನ್ನು ಆಕೆಯೇ ತೀರ್ಮಾನಿಸಬೇಕಾಗಿದೆ ಎಂದು ದೀಪಕ್ ಮಿಶ್ರಾ ಹೇಳಿದರು.
ಅರ್ಜಿದಾರನನ್ನು ಮದುವೆಯಾಗುವ ಒಪ್ಪಿಗೆಯನ್ನು ಈ ಮೊದಲು ಹಾದಿಯಾ ಹೈಕೋರ್ಟಿನಲ್ಲಿ ಸ್ಪಷ್ಟಪಡಿಸಿದ್ದಾಳೆ. ಆಕೆಯ ಒಪ್ಪಿಗೆಯಿಲ್ಲದೆ ಹೈಕೋರ್ಟಿಗೆ ಮದುವೆ ರದ್ದುಮಾಡುವ ಅಧಿಕಾರವಿದೆಯೇ ಎಂದು ನಮಗೆ ತಿಳಿಯಬೇಕಿದೆ ಎಂದು ದೀಪಕ್ ಮಿಶ್ರ ಹೇಳಿದಾಗ ಆವರೆಗೂ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದ ಜಸ್ಟಿಸ್ ಚಂದ್ರಚೂಡರು ಕೂಡಾ ಸಹಮತ ವ್ಯಕ್ತಪಡಿಸಿದರು. ಹೇಗೆ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಒಂದು ಮದುವೆಯನ್ನು ರದ್ದು ಮಾಡಲು ಸಾಧ್ಯ ಎಂದು ಜಸ್ಟಿಸ್ ಚಂದ್ರ ಚೂಡ ಕೂಡಾ ಪ್ರಶ್ನಿಸಿದರು.