ಉಗ್ರ ಉಮರ್ ಖಲೀದ್ (ಸಂಗ್ರಹ ಚಿತ್ರ)
ಶ್ರೀನಗರ: ಸೇನಾ ಶಿಬಿರಗಳ ಮೇಲೆ ದಾಳಿ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಉಮರ್ ಖಲೀದ್ ನನ್ನು ಸೋಮವಾರ ಭಾರತೀಯ ಸೇನಾಪಡೆಗಳು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದವು.
ಇದೀಗ ಈ ಪ್ರಕರಣಕ್ಕೆ ಕುತೂಹಲಕಾರಿ ಟ್ವಿಸ್ಟ್ ದೊರೆತಿದ್ದು, ಉಗ್ರ ಉಮರ್ ಖಲೀದ್ ಎನ್ ಕೌಂಟರ್ ಗೆ ಸ್ವತಃ ಆತನ ಮಾಜಿ ಪ್ರೇಯಸಿಯೇ ನೆರವು ನೀಡಿದ್ದ ವಿಚಾರ ಬಹಿರಂಗವಾಗಿದೆ. ಅರೆ ಇದೇನಿದು ಬಾಲಿವುಡ್ ಚಿತ್ರಕಥೆ ಇರುವಹಾಗೆ ಇದೆಯಲ್ಲ ಎಂದು ಭಾವಿಸಬೇಡಿ... ಇದು ನಿಜಕ್ಕೂ ಬಾಲಿವುಡ್ ಚಿತ್ರಗಳನ್ನೂ ಮೀರಿಸುವ ಕಥೆ..
ಹಾಗಿದ್ದರೆ ಆಗಿದ್ದೇನು...?
ಉಮರ್ ಖಲೀದ್ ಜೈಶ್ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಲೇ ಲವರ್ ಬಾಯ್ ಆಗಿಯೂ ಹುಡಿಗಿಯರ ಜೀವನದಲ್ಲೂ ಚೆಲ್ಲಾಟವಾಡುತ್ತಿದ್ದ. ಈಗ್ಗೆ ಕಾಶ್ಮೀರ ಮೂಲದ ಸುಮಾರು 20 ವರ್ಷ ವಯಸ್ಸಿನ ಯುವತಿಯೊಂದಿಗೂ ಚೆಲ್ಲಾಟವಾಡಿ ಆಕೆಯ ದ್ವೇಷದ ಜ್ವಾಲೆಗೆ ಸಿಕ್ಕು ಬಲಿಯಾಗಿದ್ದಾನೆ. ಉಮರ್ ಖಲೀದ್ ಮತ್ತು ಕಾಶ್ಮೀರ ಮೂಲದ ಯುವತಿ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಉಮರ್ ಖಲೀದ್ ಹೇಗೋ ಗೊತ್ತಿಲ್ಲಾ..ಆದರೆ ಯುವತಿ ಮಾತ್ರ ಈತನನ್ನು ತುಂಬಾ ಪ್ರೀತಿಸುತ್ತಿದ್ದಳು..ಈತನನ್ನೇ ತನ್ನ ಗಂಡ ಎಂದು ನಂಬಿ ತನ್ನ ಸರ್ವಸ್ವವನ್ನೂ ನೀಡಿದ್ದಳು, ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು..
ತಾನು ಗರ್ಭಿಣಿಯಾದ ವಿಚಾರ ತಿಳಿದ ಯುವತಿ ಖುಷಿಯಿಂದ ತೇಲಾಡಿ ಉಮರ್‌ನತ್ತ ಧಾವಿಸಿ, "ನೀನು ನನ್ನ ಮಗುವಿಗೆ ಅಪ್ಪನಾಗುತ್ತಿದ್ದೀಯ' ಎಂದು ಹೇಳಿ ಸಂಭ್ರಮಿಸಿದ್ದಳು. ಅದರೆ ಅವಳ ಖುಷಿ ಆಕ್ಷಣಕ್ಕೆ ಮಾತ್ರ ಸೀಮಿತವಾಗಿತ್ತು.. ಕಾರಣ ವಿಚಾರ ತಿಳಿದ ಉಮರ್ ಖಲೀದ್ "ನನಗೂ ನಿನ್ನ ಹೊಟ್ಟೆಯಲ್ಲಿರುವ ಮಗುವಿಗೂ ಯಾವುದೇ ಸಂಬಂಧವಿಲ್ಲ' ಎಂದು ಕಡ್ಡಿಮುರಿದಂತೆ ಹೇಳಿ ತೆರಳಿದ್ದ. ಈ ಮಾತು ಕೇಳುತ್ತಲೇ ಯವತಿಯ ಹೃದಯ ಛಿದ್ರವಾಗಿತ್ತು. ನಂತರ ಸಾವರಿಸಿಕೊಂಡ ಯುವತಿ ತನ್ನ ಭವಿಷ್ಯದ ಕುರಿತು ಚಿಂತಿಸಿದಳು. ಈ ವಿಷಯ ಮನೆಯವರಿಗೆ ಗೊತ್ತಾದರೆ ಸಮಸ್ಯೆಯಾದೀತು ಎಂದು ಹೆದರಿದ ಆಕೆ ಪಂಜಾಬ್‌ನ ಜಲಂಧರ್‌ಗೆ ತೆರಳಿ ಗರ್ಭಪಾತ ಮಾಡಿಸಿಕೊಂಡಿದ್ದಳು.
ಬಳಿಕ ಮನೆಗೆ ವಾಪಸ್ ಆಗಿದ್ದ ಯುವತಿ ಮನೆಗೆ ಬರುವ ದಾರಿ ಮಧ್ಯೆಯೇ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಳು..ಅದೇನೆಂದರೆ ತನಗೆ ಮೋಸ ಮಾಡಿದ ಉಮರ್ ಖಲೀದ್ ನನ್ನು ಸರ್ವನಾಶ ಮಾಡಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದಳು. ಇದಕ್ಕಾಗಿ ಸೂಕ್ತ ಸಮಯಕ್ಕಾಗಿ ಯುವತಿ ಕಾಯುತ್ತಿದ್ದಳು. ಇದೇ ಸಂದರ್ಭದಲ್ಲಿ ಕಾಶ್ಮೀರ ಪೊಲೀಸರು ಹಾಗೂ ಸೇನಾಪಡೆಗಳು ಉಮರ್ ಖಲೀದ್ ಹಾಗೂ ಆತನ ಸಹಚರರಿಗಾಗಿ ಶೋಧ ನಡೆಸುತ್ತಿದ್ದರು. ಕಳೆದ 8 ವರ್ಷಗಳಲ್ಲಿ ಹಲವು ಬಾರಿ ಜೈಶ್ ಕಮಾಂಡರ್ ಖಾಲಿದ್ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದ. ಈತನ ತಲೆಗೆ ಪೊಲೀಸರು 7 ಲಕ್ಷ ಬಹುಮಾನ ಕೂಡ ಘೋಷಣೆ ಮಾಡಿದ್ದರು.
ಏತನ್ಮಧ್ಯೆ ಕಳೆದ ವರ್ಷ ನೇರವಾಗಿ ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯ ಕಚೇರಿಗೆ ಆಗಮಿಸಿದ್ದ ಸಂತ್ರಸ್ಥ ಯುವತಿ, ಉಗ್ರ ಉಮರ್ ಖಲೀದ್ ನನಗೆ ಪರಿಚಯವಿದ್ದು, ಆತನನ್ನು ಕೊಂದು ಹಾಕಿ ಎಂದು ಕೇಳಿದ್ದಳು. ಯುವತಿಯ ಮಾತು ಕೇಳಿ ಅಚ್ಚರಿಗೊಳಗಾದ ಪೊಲೀಸರು ಆಕೆಯಿಂದ ಮಾಹಿತಿ ಪಡೆದರು. ತನಗಾದ ಅನ್ಯಾಯವನ್ನು ತೋಡಿಕೊಂಡ ಯುವತಿ, "ಉಮರ್ ಖಾಲಿದ್ ಸಾಯಬೇಕು. ನನಗೆ ಬೇಕಾಗಿರುವುದು ಅಷ್ಟೆ. ಅವನಿರುವ ಜಾಗಕ್ಕೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ. ನಂತರದ ಕೆಲಸವನ್ನು ನೀವು ಮುಗಿಸಿಬಿಡಿ ಎಂದು ಹೇಳಿದಳು.
ಯುವತಿಯ ನಿಷ್ಠುರ ಹಾಗೂ ಆಕ್ರೋಶಭರಿತ ಮಾತುಗಳನ್ನು ಕೇಳಿ ಅಲ್ಲಿದ್ದ ಪೊಲೀಸರೇ ದಂಗಾಗಿದ್ದರು. ಬಳಿಕ ಬೇರೇನೂ ಯೋಚನೆ ಮಾಡದೇ ಆಪರೇಷನ್ ಗೆ ಓಕೆ ಎಂದಿದ್ದರು. ಆಗ ಶುರುವಾಗಿದ್ದೇ ಆಪರೇಷನ್ ಲವರ್ ಬಾಯ್..
ಉಮರ್ ಖಲೀದ್ ಕುರಿತು ಮಾಹಿತಿ ಕಲೆಹಾಕಿದ್ದ ಯುವತಿ ಕೆಲ ದಿನಗಳ ಹಿಂದೆ ಖಾಲಿದ್‌ನ ಚಲನವಲನಗಳು, ಆತ ಇರುವ ಪ್ರದೇಶ, ಹೆಚ್ಚಾಗಿ ಭೇಟಿ ನೀಡುವ ಸ್ಥಳ... ಇವೆಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದಳು. ಪುಲ್ವಾಮ ಬಳಿ ಆತ ಅಡಗಿದ್ದ. ಅದರಂತೆ, ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಆದರೂ, ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದ. ಬಳಿಕ ನಿನ್ನೆ ಅಂದರೆ ಸೋಮವಾರ ಆತ ಸೋಪೋರ್‌ಗೆ ಭೇಟಿ ನೀಡುವ ಮಾಹಿತಿಯು ಯುವತಿಯ ಕಡೆಯಿಂದಲೇ ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ), ಅವನು ಸೋಪೋರ್ ತಲುಪುತ್ತಲೇ ಸುತ್ತುವರಿಯಿತು.
ಸೇನಾಪಡೆಗಳನ್ನು ನೋಡುತ್ತಲೇ ಉಗ್ರ ಖಾಲಿದ್ ಗುಂಡಿನ ಮಳೆಗರೆಯಲು ಆರಂಭಿಸಿದ. ಸೇನಾಪಡೆಯ ಯೋಧರು ಕೂಡ ಗುಂಡಿನ ದಾಳಿ ನಡೆಸಿದರು. ಸುಮಾರು 4 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆದು, ಕೊನೆಯಲ್ಲಿ ಆತನನ್ನು ಹತ್ಯೆಗೈಯ್ಯಲಾಯಿತು. ಲವರ್ ಬಾಯ್ ಆಗಿದ್ದ ಉಮರ್ ಖಲೀದ್, ಸಾಯುವ ಸಮಯದಲ್ಲೂ ಮೂವರು ಗರ್ಲ್ ಫ್ರೆಂಡ್ ಗಳನ್ನು ಹೊಂದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos