ದೇಶ

ಮಹಾತ್ಮಾ ಗಾಂಧಿ ಹತ್ಯೆಯಿಂದ ಕಾಂಗ್ರೆಸ್​ಗೆ ಲಾಭವಾಗಿದೆ: ಉಮಾ ಭಾರತಿ

Lingaraj Badiger
ಅಹಮದಾಬಾದ್: ಮಹಾತ್ಮ ಗಾಂಧಿಯ ಹತ್ಯೆಯಿಂದ ಕಾಂಗ್ರೆಸ್​ಗೆ ಲಾಭವಾಗಿದೆ. ಅವರು ಸ್ವಾತಂತ್ರ್ಯ ನಂತರ ಕಾಂಗ್ರೆಸ್​​ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದಿದ್ದರು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಅವರು ಗುರುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರುವಿಚಾರಣೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಮಾ ಭಾರತಿ, ಗೋಡ್ಸೆ ಗಾಂಧಿಯವರನ್ನು ಕೊಂದಿರಬಹುದು. ಆದರೆ ಅವರ ಹತ್ಯೆಯಿಂದ ಯಾರಿಗೆ ಲಾಭವಾಗಿದೆ ಮತ್ತು ಹತ್ಯೆಗೆ ಪ್ರಚೋದನೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆಯಿಂದ ಸಂಘ ಮತ್ತು ಜನಸಂಘಕ್ಕೆ ಸಾಕಷ್ಟು ಹಾನಿಯಾಗಿದೆ ಮತ್ತು ದೇಶ ಸಹ ಒಬ್ಬ ಮಹಾತ್ಮನನ್ನು ಕಳೆದುಕೊಂಡಿತು. ಆದರೆ ಕಾಂಗ್ರೆಸ್ ಇದರಿಂದ ಲಾಭ ಪಡೆಯಿತು ಎಂದು ಕೇಂದ್ರ ಸಚಿವೆ ಆರೋಪಿಸಿದ್ದಾರೆ.
ಮಹಾತ್ಮಾ ಗಾಂಧಿಯವರನ್ನು ಜನವರಿ 30, 1948ರಂದು ಹಿಂದೂ ಮಹಾಸಭೆಯ ನಾಥೂರಾಂ ವಿನಾಯಕ ಗೋಡ್ಸೆ ದೆಹಲಿಯಲ್ಲಿ ಗುಂಡು ಹಾರಿಸುವ ಮೂಲಕ ಹತ್ಯೆಗೈದಿದ್ದರು.
ಗಾಂಧಿ ಹತ್ಯೆ ಪ್ರಕರಣದ ಮರುವಿಚಾರಣೆ ಕುರಿತ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್​​​ ಕಳೆದ ಅಕ್ಟೋಬರ್ 6ರಂದು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರೆಂದರ್ ಶರಣ್ ಅವರನ್ನು ಕೋರ್ಟ್​ನ ಪ್ರತಿನಿಧಿಯಾಗಿ ನೇಮಿಸಿತ್ತು. ಸಂಶೋಧಕ ಮತ್ತು ಅಭಿನವ್ ಭಾರತ್ ಟ್ರಸ್ಟ್​​​ನ ಧರ್ಮದರ್ಶಿಯಾಗಿರುವ ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಗಾಂಧಿ ಹತ್ಯೆ ಕುರಿತು ಮರು ತನಿಖೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದಾರೆ.
SCROLL FOR NEXT