ಭೋಪಾಲ್: ಹತ್ಯೆಗೀಡಾಗಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಆರ್ ಎಸ್ ಎಸ್ ಸಂಘಟನೆ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದೆ.
ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಗುರುವಾರ ಆರಂಭಗೊಂಡ ಆರೆಸ್ಸೆಸ್ ನ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಕಳೆದ ತಿಂಗಳು ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಇತ್ತೀಚಿಗೆ ನಿಧನರಾದ ಖ್ಯಾತ ರಂಗ ಕಲಾವಿದ ಚಿಟ್ಟಾಣಿ ಅವರಿಗೆ ಗೌರವ ಸಲ್ಲಿಕೆ ಮಾಡಲಾಗಿದೆ. ಚಿಟ್ಟಾಣಿ ಮತ್ತು ಗೌರಿ ಲಂಕೇಶ್ ಅವರು ಸಮಾಜಕ್ಕೆ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಯಿತು ಎಂದು ತಿಳಿದುಬಂದಿದೆ.
ಆರ್ ಎಸ್ ಎಸ್ ಸಂಘಟನೆಯ ಮುಖ್ಯಸ್ಥ ಮೋಹನ ಭಾಗವತ್ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಆಗಮಿಸಿರುವ ಆರೆಸ್ಸೆಸ್ ನಾಯಕರು ಗೌರಿ ಲಂಕೇಶ್, ಮಾಜಿ ಇಸ್ರೋ ಅಧ್ಯಕ್ಷ ಯು.ಆರ್.ರಾವ್, ಕರ್ನಾಟಕದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರದ್ಧಾಂಜಲಿಗಳನ್ನು ಅರ್ಪಿಸಿದರು. ಆರೆಸ್ಸೆಸ್ ಸಭೆಯಲ್ಲಿ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾದ ಗಣ್ಯರ ದೊಡ್ಡ ಪಟ್ಟಿಯೇ ಇದ್ದು, ಗೌರಿ ಲಂಕೇಶ್ ಸಹ ಅದರಲ್ಲಿ ಸೇರಿದ್ದಾರೆ ಎಂದು ಸಂಘದ ಪ್ರಚಾರ ಪ್ರಮುಖ ಮನಮೋಹನ ವೈದ್ಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆರೆಸ್ಸೆಸ್ ಮೂರು ದಿನಗಳ ಸಭೆಯಲ್ಲಿ ದೇಶದ ಆರ್ಥಿಕತೆಯ ಸ್ಥಿತಿ ಹಾಗೂ ಮಯನ್ಮಾರ್ ನಿಂದ ರೊಹಿಂಗ್ಯಾಗಳ ವಲಸೆ ಮತ್ತು ಗೋರಕ್ಷಕರಿಂದ ಹಿಂಸಾಚಾರದಂತಹ ಹಲವಾರು ವಿಷಯಗಳನ್ನು ಚರ್ಚಿಸಲಿದೆ ಎಂದು ಮನಮೋಹನ ವೈದ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics