ನವದೆಹಲಿ: ದೀಪಾವಳಿ ದಿನ ಬಿಡುಗಡೆಯಾದ ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ "ಮೆರ್ಸಲ್ " ನಲ್ಲಿ ಕೆಲವು ಸಂಭಾಷಣೆಗಳನ್ನು ತೆಗೆದುಹಾಕುವ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿದಂಬರಂ ಬಿಜೆಪಿಯ ಮೇಲೆ ಹರಿಹಾಯ್ದಿದ್ದು "ಸರ್ಕಾರದ ನೀತಿಗಳನ್ನು ಪ್ರಶಂಸಿಸುವ ಸಾಕ್ಷ್ಯಚಿತ್ರಗಳನ್ನು ಮಾತ್ರ ತಯಾರಿಸಬೇಕು ಎನ್ನುವ ಕಾನೂನು ಜಾರಿಯಲ್ಲಿದೆ" ಎಂದು ಟೀಕಿಸಿದರು.
"ಮೆರ್ಸಲ್ " ನಲ್ಲಿ ನ ಸಂಭಾಷಣೆಗಳನ್ನು ತೆಗೆದುಹಾಕಲು ಬಿಜೆಪಿ ಹೇಳುತ್ತದೆ, ಇಂದೇನಾದರೂ 'ಪರಾಶಕ್ತಿ' ಬಿಡುಗಡೆಯಾದರೆ ಅದರ ಪರಿಣಾಮಗಳನ್ನು ಊಹಿಸಿಕೊಳ್ಳಿ." ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
"ಚಲನಚಿತ್ರ ತಯಾರಕರಿಗೆ ಸೂಚನೆ: ಕಾನೂನು ಬರುತ್ತಿದೆ, ನೀವು ಸರ್ಕಾರದ ನೀತಿಗಳನ್ನು ಪ್ರಶಂಸಿಸುವ ಸಾಕ್ಷ್ಯಚಿತ್ರಗಳನ್ನು ಮಾತ್ರ ತಯಾರಿಸಬೇಕು" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
1950 ರ ದಶಕದಲ್ಲಿ ಡಿಎಂಕೆ ನಾಯಕ ಎಂ. ಕರುಣಾನಿಧಿಯವರು ಬರೆದು ಶಿವಾಜಿ ಗಣೇಶನ್ ನಟಿಸಿದ್ದ "ಪರಾಶಕ್ತಿ" 50 ರ ದಶಕದಲ್ಲಿ ಜಾರಿಯಲ್ಲಿದ್ದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಪ್ರಬಲ ವಿಮರ್ಶೆಯಾಗಿತ್ತು, ಶಿವಾಜಿ ಗಣೇಶನ್ ಅವರ ಅದ್ಭುತ ಸಂಭಾಷಣೆಯಿಂದ ಚಿತ್ರ ಸಾಕಷ್ಟು ಜನಪ್ರಿಯವಾಗಿತ್ತು.