ನೈನ್ ಸಿಂಗ್ ರಾವತ್ ಕುರಿತ ಗೂಗಲ್-ಡೂಡಲ್
ನವದೆಹಲಿ: ಹಿಮಾಲಯ ಅನ್ವೇಷಕರೆಂದೇ ಖ್ಯಾತರಾದ ನೈನ್ ಸಿಂಗ್ ರಾವತ್ ರ 187ನೇ ಜನ್ಮದಿನವನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶಿಷ್ಟ ಡೂಡಲ್ ಮೂಲಕ ನೆನಪಿಸಿದೆ.
ಹಿಮಾಲಯ ಪರ್ವತಗಳ ನಡುವೆ ದೂರದರ್ಶಕ ಹಿಡಿದು ನಿಂತು ನೋಡುತ್ತಿರುವ ವ್ಯಕ್ತಿಯ ವಿಶಿಷ್ಟ ಚಿತ್ರವನ್ನು ಬಿಡಿಸುವ ಮೂಲಕ ಗೂಗಲ್ ಹಿಮಾಲಯ ಅನ್ವೇಷಕ ನೈನ್ ಸಿಂಗ್ ರಾವತ್ ರ ಜನ್ಮ ದಿನವನ್ನು ನೆನಪಿಸಿದೆ. 19 ನೇ ಶತಮಾನದ ಪ್ರಮುಖ ಅನ್ವೇಷಕರಲ್ಲಿ ಅಗ್ರಗಣ್ಯರಾಗಿರುವ ನೈನ್ ಸಿಂಗ್ ರಾವತ್ ಅವರು, ಬ್ರಿಟೀಷರಿಗೆ ಹಿಮಾಲಯವನ್ನು ಪರಿಶೋಧಿಸಿ ಕೊಟ್ಟಿದ್ದರು. ಅಂದಿನ ಕಾಲಕ್ಕೆ ಅತ್ಯಂತ ದುರ್ಗಮ ಪ್ರದೇಶವಾಗಿದ್ದ ಟಿಬೆಟ್ ಗೆ ಮಾರ್ಗ ಹುಡುಕಿಕೊಟ್ಟ ಶ್ರೇಯ ನೈನ್ ಸಿಂಗ್ ರಾವತ್ ಅವರಿಗೆ ಸಲ್ಲುತ್ತದೆ. ನೇಪಾಳದ ಮೂಲಕ ಟಿಬೆಟ್ ಗೆ ವ್ಯಾಪಾರ ಮಾರ್ಗ ಅನ್ವೇಷಿಸಿ ಕೊಟ್ಟ ಶ್ರೇಯ ಇವರಿಗೇ ಸಲ್ಲುತ್ತದೆ. ಲಾಸಾದ ಸ್ಥಳ ಮತ್ತು ಎತ್ತರವನ್ನು ಮೊದಲ ಬಾರಿಗೆ ನಿರ್ಧರಿಸಿದ್ದು ಇದೇ ನೈನ್ ಸಿಂಗ್ ರಾವತ್ ಅವರು.
1830 ರಲ್ಲಿ ಜೊಹಾರ್ ಕಣಿವೆಯಲ್ಲಿನ ಭೋಟಿಯಾದ ಮಿಲಾಮ್ ಗ್ರಾಮದಲ್ಲಿ ರಾಯ್ ಬಹದ್ದೂರ್ ನೈನ್ ಸಿಂಗ್ ರಾವತ್ ಅವರು ಜನಿಸಿದರು. ಶಾಲಾ ದಿನಗಳಲ್ಲೇ ಸಾಹಸೀ ಪ್ರವೃತ್ತಿ ಹೊಂದಿದ್ದ ನೈನ್ ಸಿಂಗ್ ರಾವತ್, ಶಾಲಾ ಶಿಕ್ಷಣದ ಬಳಿಕ ತಮ್ಮ ತಂದೆಗೆ ವ್ಯಾಪಾರದಲ್ಲಿ ನೆರವಾದರು. ಈ ವೇಳೆ ತಮ್ಮ ತಂದೆಯೊಂದಿಗೆ ಟಿಬೆಟ್ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ಅಲೆದಾಡಿದರು. ಈ ವೇಳೆ ಟಿಬೆಟಿಯನ್ ಭಾಷೆ , ಸಂಪ್ರದಾಯ ಮತ್ತು ಇತರೆ ವಿಚಾರಗಳನ್ನು ಕಲಿತ ನೈನ್ ಸಿಂಗ್ ರಾವತ್ ಅವರು, ಟಿಬೆಟಿಯನ್ನರಿಗೆ ಪರಿಚಿತರಾದರು.
ಟಿಬೆಟಿಯನ್ ಧಿರಿಸು ಮತ್ತು ಅವರ ಸಂಪ್ರದಾಯಗಳೇ ನೈನ್ ಸಿಂಗ್ ರಾವತ್ ರನ್ನು ಅನ್ವೇಷಣೆಯತ್ತ ದೂಡಿತು ಎನ್ನಲಾಗಿದೆ. ಮಿಲಾಮ್ ಮತ್ತು ಮೇಲಿನ ಜೋಹಾರ್ ಕಣಿವೆಗಳಲ್ಲಿ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ತೀವ್ರತರವಾದ ಶೀತದ ವಾತಾವರಣ ಮತ್ತು ಮಂಜು ಬೀಳುವಿಕೆ ಇರುತ್ತಿತ್ತು. ಹೀಗಾಗಿ ಇಲ್ಲಿನ ಜನರು ಟಿಬೆಟ್ ನ ಜಿಯಾನಿಮಾ, ಗಾರ್ಟೊಕ್ ಮತ್ತು ಇತರೆ ಪ್ರದೇಶಗಳಿಗೆ ತೆರಳುತ್ತಿದ್ದರು.
ನೈನ್ ಸಿಂಗ್ ಅವರ ಅನ್ವೇಷಕ ಗುಣವನ್ನು ಗಮನಿಸಿದ ಜರ್ಮನ್ ನ ಭೂಗೋಳಶಾಸ್ತ್ರಜ್ಞರಾದ ಶ್ಲ್ಯಾಗಿಂಟ್ವೀಟ್ ಸಹೋದರರು 1855ರಲ್ಲಿ ನೈನ್ ಸಿಂಗ್ ರಾವತ್ ರನ್ನು ಸರ್ವೆ ಆಫ್ ಇಂಡಿಯಾ ಕಚೇರಿಗೆ ಆಯ್ಕೆ ಮಾಡಿದರು. ರಾವತ್ ಅವರಿಗೆ ಆಗಿನ್ನೂ ಕೇವಲ 25 ವರ್ಷ ವಯಸ್ಸು. ಬಳಿಕ 1885 ರಿಂದ 1857ರವರೆಗೆ ಜರ್ಮನ್ ಭೂಗೋಳಶಾಸ್ತ್ರಜ್ಞರೊಂದಿಗೆ ನೈನ್ ಸಿಂಗ್ ಹಲವು ಪರಿಶೋಧನಾ ಪ್ರವಾಸ ಮಾಡಿದರು. ಈ ವೇಳೆ ಅವರು ಮಾನಸರೋವರ, ರಾಕಾಸ್ ತಾಲ್, ಗೋರ್ಟಕ್ ಮತ್ತು ಲಡಾಕ್ ಗೆ ಭೇಟಿ ನೀಡಿದ್ದರು. ಬಳಿಕ 1858 ರಿಂದ 1863 ರವರೆಗೆ ಮಿಲಾಮ್ ನಲ್ಲಿರುವ ಸರ್ಕಾರಿ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೈನ್ ಸಿಂಗ್ ರಾವತ್ ನೇಮಕಗೊಂಡರು. ಅಂತೆಯೇ 1863 ರಲ್ಲಿ, ತಮ್ಮ ಸೋದರ ಮಣಿ ಸಿಂಗ್ ರಾವತ್ ರೊಂದಿಗೆ ಡೆಹ್ರಾಡೂನ್ ನ ಗ್ರೇಟ್ ಟ್ರಿಗ್ನೋಮೆಟ್ರಿಕ್ ಸಮೀಕ್ಷಾ ಕಚೇರಿಗೆ ನೈನ್ ಸಿಂಗ್ ರಾವತ್ ರನ್ನು ನೇಮಕ ಮಾಡಲಾಯಿತು. ಅಲ್ಲಿ ಎರಡು ವರ್ಷಗಳ ತರಬೇತಿ ಪಡೆದ ಇಬ್ಬರು ವೈಜ್ಞಾನಿಕ ಉಪಕರಣಗಳು ಮತ್ತು ಅಳತೆ ಮತ್ತು ರೆಕಾರ್ಡಿಂಗ್ ವಿಧಾನಗಳ ಬಳಕೆ ಕುರಿತಂತೆ ತರಬೇತಿ ಪಡೆದರು.
ತರಬೇತಿ ಸಂದರ್ಭದಲ್ಲಿ ತಮಗೆ ನೀಡಲಾಗಿದ್ದ ವೈಜ್ಞಾನಿಕ ಉಪಕರಣಗಳ ಬಳಕೆಯ ಕುರಿತು ಕಲಿತಿದ್ದ ನೈನ್ ಸಿಂಗ್ ರಾವತ್ ಅವುಗಳ ಪರಿಣಾಮಕಾರಿ ಬಳಕೆ ಮೂಲಕ ದೂರ ದೂರದ ಮಾರ್ಗಗಳನ್ನು ಅನ್ವೇಷಣೆ ಮಾಡಿದರು. 1873-75ರಲ್ಲಿ ಲೇಹ್ ನಿಂದ ಲಡಾಖ್ ಮೂಲಕ ಲಾಸಾದಿಂದ ಅಸ್ಸಾಂಗೆ ನೈನ್ ಸಿಂಗ್ ರಾವತ್ ಪ್ರಯಾಣಿಸಿದ್ದರು. ಇದು ಸುಮಾರು 2 ಸಾವಿರ ಕಿ.ಮೀ ದೂರದ ಪ್ರಯಾಣವಾಗಿದ್ದು, ಇದು ಅವರ ಜೀವನದಲ್ಲೇ ಅತ್ಯಂತ ದೊಡ್ಡ ಪ್ರಯಾಣ ಎಂದು ಹೇಳಲಾಗಿದೆ. 1867 ರಲ್ಲಿ ಸಿಂಗ್ ಪಶ್ಚಿಮ ಟಿಬೆಟ್ ಅನ್ನು ಅನ್ವೇಷಿಸಿದರು ಅಲ್ಲದೇ ಪ್ರಸಿದ್ಧ ಥೋಕ್ ಜಲುಂಗ್ ಚಿನ್ನದ ಗಣಿಗಳಿಗೆ ಭೇಟಿ ನೀಡಿದರು.
ನೈನ್ ಸಿಂಗ್ ಅವರ ಈ ಸಾಹಸೀ ಅನ್ವೇಷಣೆಗಳನ್ನು ಗುರುತಿಸಿ 1868 ರಲ್ಲಿ ರಾಯಲ್ ಜಿಯಾಗ್ರಫಿಕ್ ಸೊಸೈಟಿ ಚಿನ್ನದಲ್ಲಿ ಕೆತ್ತಿದ ಕಾಲಮಾಪಕವನ್ನು ನೈನ್ ಸಿಂಗ್ ರಾವತ್ ಅವರಿಗೆ ನೀಡಿತ್ತು. ಅಂತೆಯೇ ಪ್ಯಾರಿಸ್ ಭೂಗೋಳ ಶಾಸ್ತ್ರಜ್ಞರ ಸಂಘವು ನೈನ್ ಸಿಂಗ್ ಅವರಿಗೆ ಚಿನ್ನದಲ್ಲಿ ಕೆತ್ತಿದ ಗಡಿಯಾರವನ್ನು ನೀಡಿ ಗೌರವಿಸಿತ್ತು. ಭಾರತ ಸರ್ಕಾರವು ನೈನ್ ಸಿಂಗ್ ಅವರಿಗೆ ಎರಡು ಗ್ರಾಮಗಳನ್ನು ಭೂ-ಅನುದಾನವಾಗಿ ನೀಡಿತ್ತು. 2004ರಲ್ಲಿ ನೈನ್ ಸಿಂಗ್ ರಾವತ್ ಅವರ ಪೋಸ್ಟ್ ಸ್ಟಾಂಪ್ ಅನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. 2006ರಲ್ಲಿ ಶೇಖರ್ ಪಾಠಕ್ ಹಾಗೂ ಉಮಾ ಭಟ್ ಎಂಬುವವರು ನೈನ್ ಸಿಂಗ್ ರಾವತ್ ಅವರ ಜೀವನ ಚರಿತ್ರೆ ಪುಸ್ತಕವನ್ನು ಹೊರತಂದಿದ್ದರು.
ನೈನ್ ಸಿಂಗ್ ರಾವತ್ ಅವರು 1882 ರ ಫೆಬ್ರವರಿ 1 ರಂದು ಮೊರಾದಾಬಾದ್ ನಲ್ಲಿ ನಿಧನರಾದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos